Bjp Sunil Kumar, Speaker UT Khader: ವಿಧಾನಮಂಡಲದ ಇತಿಹಾಸದಲ್ಲೇ ನೀವೊಬ್ಬ ಸರ್ವಾಧಿಕಾರಿ ಸ್ಪೀಕರ್ ಎಂದು ಸಾಬೀತಾಗಿದೆ ; ಅಮಾನತು ಶಿಕ್ಷೆ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಿಡಿಸಿದ ಕಾರ್ಕಳ ಬಿಜೆಪಿ ಶಾಸಕ 

20-07-23 03:08 pm       Bangalore Correspondent   ಕರ್ನಾಟಕ

ವಿಧಾನಸಭೆಯಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಬಿಜೆಪಿಯ 10 ಸದಸ್ಯರನ್ನು ಸ್ಪೀಕರ್‌ ಯುಟಿ ಖಾದರ್‌ ಅಮಾನತು ಮಾಡಿದ್ದಾರೆ.

ಬೆಂಗಳೂರು, ಜು.20: ವಿಧಾನಸಭೆಯಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಬಿಜೆಪಿಯ 10 ಸದಸ್ಯರನ್ನು ಸ್ಪೀಕರ್‌ ಯುಟಿ ಖಾದರ್‌ ಅಮಾನತು ಮಾಡಿದ್ದಾರೆ. ಸ್ಪೀಕರ್‌ ನಿರ್ಧಾರಕ್ಕೆ ಕಾರ್ಕಳ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಏಕಪಕ್ಷೀಯವಾಗಿ ಅಮಾನತು ಶಿಕ್ಷೆ ಕೊಟ್ಟಿದ್ದಕ್ಕಾಗಿ ಧನ್ಯವಾದ ಸಮರ್ಪಣೆ ಮಾಡಿ ಸ್ಪೀಕರ್‌ ಯುಟಿ ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ.

ಸುನೀಲ್‌ ಕುಮಾರ್‌ ಅವರು ಯುಟಿ ಖಾದರ್‌ ಅವರಿಗೆ ಬರೆದ ಪತ್ರದಲ್ಲಿ, ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮ ನಿರೀಕ್ಷೆ ಇಂದು ಉಸುಕಿನ ಸೌಧದಂತೆ ಕುಸಿದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಶ್ರೇಷ್ಠ ಸ್ಪೀಕರ್ ಎಂದು ಮಾದರಿ ಹೆಜ್ಜೆ ಬಿಟ್ಟು ಹೋದ ದಿವಂಗತ ವೈಕುಂಠ ಬಾಳಿಗರ ಜಿಲ್ಲೆಯಿಂದ ಬಂದ ನೀವು ಅವರದೇ ಮಾರ್ಗದಲ್ಲಿ ನಡೆಯಬಹುದೆಂದು ವೈಯಕ್ತಿಕವಾಗಿ ನಾನು ಭಾವಿಸಿದ್ದೆ. ಆದರೆ, ನೀವು ನಮ್ಮೆಲ್ಲರ ನಂಬಿಕೆಯನ್ನು ಹುಸಿಗೊಳಿಸಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದಿರಿ. ನನ್ನನ್ನು ಸೇರಿ ಹತ್ತು ಜನರನ್ನು ಅಮಾನತುಗೊಳಿಸುವ ಮೂಲಕ ಕಾಂಗ್ರೆಸ್ ನಾಯಕರ ಎದೆಯಲ್ಲಿ ಅಂತಸ್ಥವಾದ ಹಿಟ್ಲರ್‌ನನ್ನು ವಿಧಾನಸಭೆಯ ಮೂಲಕ ಪ್ರದರ್ಶನಕ್ಕೆ ಇಟ್ಟಿರಿ ಎನ್ನದೇ ವಿಧಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka polls: Khader holds fort in Hindutva heartland - The New Indian  Express

ಮಾನ್ಯ ಖಾದರ್ ಅವರೇ ನಾನು ಹಾಗೂ ನೀವು ಹೆಚ್ಚು ಕಡಿಮೆ ಒಂದೇ ವರ್ಷ ವಿಧಾನಸಭೆಯನ್ನು ಪ್ರವೇಶ ಮಾಡಿದ್ದೇವು. 2004ರಿಂದ ಇಲ್ಲಿಯವರೆಗೆ ನಾನು ಸದನದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವು ಕೂಡಾ ಸಾಕ್ಷಿಯಾಗಿದ್ದೀರಿ. ಅನಾರೋಗ್ಯ ಹಾಗೂ ಅತಿ ತುರ್ತು ಸಂದರ್ಭವನ್ನು ಹೊರತುಪಡಿಸಿದರೆ ನಾನು ಸದನಕ್ಕೆ ಗೈರಾದ ದಿನಗಳೇ ಇಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿ ಅದರಂತೆ ನಡೆದುಕೊಂಡವರು ನಾವು. ಆದರೆ, ನಿಮ್ಮ ಪಕ್ಷದ ಅಜೆಂಡಾವನ್ನು ಪೋಷಿಸುವುದಕ್ಕಾಗಿ ನಾವು ನಮ್ಮ ಶ್ರದ್ಧಾ ಕೇಂದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹಾಕಿಬಿಟ್ಟಿರಲ್ಲ, ಇದಕ್ಕಾಗಿ ನಿಮಗೊಂದು ದೀರ್ಘದಂಡ ಪ್ರಣಾಮ, ಅನಂತಾನಂಥ ಧನ್ಯವಾದ ಎಂದು ಹೇಳಿದ್ದಾರೆ.

ಮಾನ್ಯ ಸಭಾಧ್ಯಕ್ಷರೇ ಇಂದು ನೀವು ನಡೆದುಕೊಂಡ ರೀತಿ ಆ ಪೀಠಕ್ಕೆ ಒಪ್ಪುವಂತೆ ಇತ್ತೇ? ಆತ್ಮವಂಚನೆ ಮಾಡಿಕೊಳ್ಳದೇ ಹೇಳಿ. ಮನುಷ್ಯ ಈ ಪ್ರಪಂಚದಲ್ಲಿ ಯಾರಿಗೆ ಬೇಕಾದರೂ ವಂಚಿಸಬಹುದು, ಆದರೆ ತನ್ನನ್ನು ತಾನೇ ವಂಚಿಸಿಕೊಳ್ಳಲು ಸಾಧ್ಯವಿಲ್ಲ ತಾನೇ? ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಬಜೆಟ್ ಅಧಿವೇಶನದಲ್ಲೇ ಶಾಸಕರನ್ನು ಅಮಾನತು ಮಾಡುವ ಮೂಲಕ ವಿಧಾನಮಂಡಲದ ಇತಿಹಾಸದಲ್ಲೇ ನೀವೊಬ್ಬ ಸರ್ವಾಧಿಕಾರಿ ಸ್ಪೀಕರ್ ಎಂದು ಸಾಬೀತುಪಡಿಸಿದಿರಿ. ಇನ್ನು ನಿಮ್ಮಿಂದ ನಾವೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

When the day’s session started earlier on, BJP lawmakers raised the issue of the Congress government deploying IAS officers for the ‘United We Stand’ meeting. Credit: Credit: Screengrab/ NIC webcast

ಈ ಸರ್ಕಾರದ ಮೊದಲ ದಿನದ ಅಧಿವೇಶನದಲ್ಲಿ ವಿಪಕ್ಷ ನಾಯಕರು ಧರಣಿ ನಡೆಸುತ್ತಿರುವಾಗಲೇ ಪ್ರಶೋತ್ತರ ಕಲಾಪ ನಡೆಸಿದಾಗಲೇ ನೀವು ಪಕ್ಷಪಾತಿಯಾಗಿ ನಡೆದುಕೊಳ್ಳುವ ವಾಸನೆ ನಮಗೆಲ್ಲ ಬಡಿದಿತ್ತು. ಆದರೆ, ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಔತಣ ಕೂಟದಲ್ಲಿ ಭಾಗಿಯಾದಿರಿ. ಅಯೋಗ್ಯರಿಗೆ ರಾಜಾತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ನಮ್ಮ ಹೋರಾಟ ಹತ್ತಿಕ್ಕಿ ವಿಧಾನಸಭೆ ಕಲಾಪವನ್ನು ಕಾಂಗ್ರೆಸ್ ಕಲಾಪವನ್ನಾಗಿ ಪರಿವರ್ತಿಸಿದಿರಿ. ಇಂಥ ಸಂವಿಧಾನ ಬಾಹಿರ, ಕಲಾಪ ನಿಯಮ ವಿರೋಧಿಯಾದ ನಿಮಗೆ ಅಭಿನಂದನೆ ಸಲ್ಲಿಸಲೇಬೇಕಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.

ಖಾದರ್ ಅವರೇ ಸ್ಪೀಕರ್ ಸ್ಥಾನ ಆಳುವವರ ಆಸೆಗೆ ಗೋಣು ಆಡಿಸುವ ಅಡ್ಡೆಯಲ್ಲ. ಅದಕ್ಕೊಂದು ಘನ ಇತಿಹಾಸವಿದೆ. ಪರಂಪರೆ ಇದೆ. ಇಂದು ನೀವು ತೋರಿದ ಸರ್ವಾಧಿಕಾರಿ ಧೋರಣೆ ನಿಮಗೆ ಕ್ಷಣಿಕ ಆನಂದ ನೀಡಿರಬಹುದು. ಪಕ್ಷದ ಹೈಕಮಾಂಡ್ ಮೆಚ್ಚುವಂತೆ ನಡೆದೆ ಎಂದು ಉಬ್ಬಿಸಬಹುದು. ಆದರೆ ನೆನಪಿಡಿ, ನೀವು ಕರ್ನಾಟಕದ ಉಜ್ವಲ ಸಂಸದೀಯ ಪರಂಪರೆಗೆ ಈ ಮೂಲಕ ಕಳಂಕ ಅಂಟಿಸಿದಿರಿ. ನಮ್ಮನ್ನು ಅಮಾನತು ಮಾಡಿದ ಮಾತ್ರಕ್ಕೆ ನಮ್ಮ ಧ್ವನಿಯನ್ನು ಅಡಗಿಸಿಬಿಟ್ಟೆ ಎಂಬ ಭ್ರಮೆ ಬೇಡ. ಎಲ್ಲರಿಗೂ ಅವರವರ ಸರದಿ ಕಾಯುತ್ತಿರುತ್ತದೆ. ಆಷಾಡದ ಬಳಿಕ ಶ್ರಾವಣ ಬಂದೇ ಬರುತ್ತದೆ. ಕಾಯಬೇಕಷ್ಟೆ ಎಂದು ವಿ ಸುನಿಲ್‌ ಕುಮಾರ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Most Dictator Speaker of Assembly is UT khader says Karkala MLA Sunil kumar after 10 mlas suspended from Assembly. Karnataka Legislative Assembly Speaker U T Khader suspended 10 BJP MLAs for ‘indiscipline’ on Wednesday, after the legislators tore copies of the Bills passed in the House and threw them at Deputy Speaker Rudrappa Lamani.