Hubli accident, car truck, Hassan: ಹುಬ್ಬಳ್ಳಿ ; ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ; ಹಾಸನ ಮೂಲದ ನಾಲ್ವರು ಯುವಕರ ದುರ್ಮರಣ

06-01-24 01:34 pm       HK News Desk   ಕರ್ನಾಟಕ

ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇತರ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಹುಬ್ಬಳ್ಳಿ, ಜ.06: ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇತರ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಹಾಸನ‌ ಜಿಲ್ಲೆಯ ಅರಕಲಕೂಡಿನ ಮಣಿಕಂಠ (26), ಪವನ್ (23), ಚಂದನ್ (31) ಹಾಗೂ ಹರೀಶ್ (34) ಎಂದು ಗುರುತಿಸಲಾಗಿದೆ.

ಮೊದಲು, ಬೆಂಗಳೂರಿನಿಂದ ಶಿರಡಿ ಹಾಗೂ ಗೋವಾಕ್ಕೆ ಹೊರಟಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಎರಡೂ ಕಾರಿನಲ್ಲಿದ್ದ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆಗ ಇಬ್ಬರನ್ನು ಆಂಬ್ಯುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ ನಾಲ್ಕು ಜನರು ರಸ್ತೆ ಪಕ್ಕದಲ್ಲಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ಹಾವೇರಿ ಕಡೆಯಿಂದ ಬಂದ ಲಾರಿಯು ಅಪಘಾತವಾಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಪಕ್ಕದಲ್ಲೇ ನಿಂತಿದ್ದ ನಾಲ್ವರೂ ತೀವ್ರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಹಾಗೂ ಕುಂದಗೋಳ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಶವಗಳನ್ನು ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕುಂದಗೋಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ‌ ಬಗ್ಗೆ ಮೃತರ ಸಂಬಂಧಿಗಳಿಗೆ ಮಾಹಿತಿ ರವಾನಿಸಲಾಗಿದೆ. ಬೆಳಗ್ಗೆ ಮಂಜು ಆವರಿಸಿದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂಬ ಸಂಶಯವಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ' ಎಂದು ಎಸ್​​ಪಿ ಗೋಪಾಲ್ ಬ್ಯಾಕೋಡ್ ಮಾಹಿತಿ ನೀಡಿದ್ದಾರೆ.

Hubli accident, car truck, four youths from hassan killed on spot.