Mysuru BJP, Prathap Simha, Jds, Sa Ra Mehesh, lMP ticket: ಮೈಸೂರು ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಬಿಗ್ ಸರ್ಜರಿ ; ಪ್ರತಾಪಸಿಂಹ ಸೀಟಿಗೆ ಕತ್ತರಿ ಖಚಿತ, ಕಾಂಗ್ರೆಸ್ ಸೋಲಿಸಲು ಸಾರಾ ಮಹೇಶ್ ಕಣಕ್ಕಿಳಿಸಲು ಪ್ಲಾನ್, ಕಮಲ ಚಿಹ್ನಯಲ್ಲೇ ದಳಪತಿ ಸ್ಪರ್ಧೆ !

24-02-24 02:29 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದು, ಮೈಸೂರು- ಕೊಡಗು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪಸಿಂಹ ಅವರಿಗೂ ಟಿಕೆಟ್ ಕೈತಪ್ಪಲಿದೆ ಎನ್ನುವ ಲೆಕ್ಕಾಚಾರ ಕೇಳಿಬಂದಿದೆ.

ಬೆಂಗಳೂರು, ಫೆ.24: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದು, ಮೈಸೂರು- ಕೊಡಗು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪಸಿಂಹ ಅವರಿಗೂ ಟಿಕೆಟ್ ಕೈತಪ್ಪಲಿದೆ ಎನ್ನುವ ಲೆಕ್ಕಾಚಾರ ಕೇಳಿಬಂದಿದೆ. ಇದಕ್ಕೆ ಕಾರಣವಾಗಿರುವುದು ಬಿಜೆಪಿ – ಜೆಡಿಎಸ್ ಮೈತ್ರಿ ನಾಯಕರು ಮೈಸೂರಿನಲ್ಲಿಯೂ ಜೆಡಿಎಸ್ಸಿನ ಪ್ರಭಾವಿ ಮುಖಂಡರೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನುವ ಸುದ್ದಿ.

ಈಗಾಗಲೇ ಜೆಡಿಎಸ್ಸಿಗೆ ಮೂರು ಕ್ಷೇತ್ರ ಎನ್ನಲಾಗುತ್ತಿದ್ದರೆ, ಕುಮಾರಸ್ವಾಮಿ ಮಾತ್ರ ಐದು ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದಾರಂತೆ. ಕೋಲಾರ, ಮಂಡ್ಯ, ಹಾಸನ, ತುಮಕೂರು ಜೊತೆಗೆ ಮೈಸೂರು ಕ್ಷೇತ್ರಕ್ಕೂ ಕಣ್ಣಿಟ್ಟಿದ್ದಾರೆ. ಇದೇ ವೇಳೆ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಭಾವಿಯಾಗಿರುವುದು ಮತ್ತು ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರ ಆಗಿರುವುದರಿಂದ ಗೆಲ್ಲುವುದಕ್ಕೆ ಮೈತ್ರಿ ಪಕ್ಷಗಳು ಕಸರತ್ತು ನಡೆಸಿವೆ. ಕೊಡಗಿನಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳು, ಮೈಸೂರಿನಲ್ಲಿ ಮೂರು ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲಿ ಇರುವುದರಿಂದ ಈ ಬಾರಿ ಬಿಜೆಪಿಗೆ ಸವಾಲಾಗಬಹುದು ಎನ್ನುವ ಲೆಕ್ಕಾಚಾರ ಇದೆ.

ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರುವುದು ಮತ್ತು ಒಕ್ಕಲಿಗ ಮತಗಳೇ ನಿರ್ಣಾಯಕ. ಆದರೆ ಹಾಲಿ ಎಂಪಿ ಇರುವ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಒಪ್ಪಿಗೆ ಇಲ್ಲ. ರಾಜ್ಯ ಮಟ್ಟದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ತೀರ್ಮಾನವೇ ಅಂತಿಮ ಆಗಿರುವುದರಿಂದ ಈ ಬಗ್ಗೆ ಒಳ ರಾಜಕೀಯದ ದಾಳ ಉರುಳಿಸಿದ್ದಾರೆ. ಸ್ವತಃ ಬಿಎಸ್ ಯಡಿಯೂರಪ್ಪ ಅವರೇ ಜೆಡಿಎಸ್ಸಿನ ಪ್ರಭಾವಿ ನಾಯಕ ಸಾರಾ ಮಹೇಶ್ ಅವರನ್ನು ಬಿಜೆಪಿ ಚಿಹ್ನೆಯಿಂದ ಮೈಸೂರಿನಿಂದ ಕಣಕ್ಕಿಳಿಸುವ ಆಫರ್ ಮುಂದಿಟ್ಟಿದ್ದಾರೆ. ಈ ಬಗ್ಗೆ ಸಾರಾ ಮಹೇಶ್ ಜೊತೆಗೆ ಯಡಿಯೂರಪ್ಪ ಅವರೇ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಮುಖಂಡನನ್ನು ಬಿಜೆಪಿ ಚಿಹ್ನೆಯಲ್ಲಿ ಕಣಕ್ಕಿಳಿಸುವ ಮೂಲಕ ಮೈತ್ರಿಗೆ ಹೊಸ ವ್ಯಾಖ್ಯಾನ ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ. ಈ ರೀತಿ ಮಾಡಿದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರೂ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ನಿರಾಯಾಸವಾಗಿ ಕ್ಷೇತ್ರವನ್ನು ಗೆಲ್ಲಿಸಬಹುದು ಎನ್ನುವ ಪ್ಲಾನ್ ಯಡಿಯೂರಪ್ಪ ಅವರದ್ದು. ಬಿಜೆಪಿ ಹೈಕಮಾಂಡಿಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಗೆಲ್ಲುವುದಷ್ಟೇ ಮುಖ್ಯ. ಹಾಗಾಗಿ ಯಾರನ್ನು ಬದಲಿಸುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಇದೇ ನೀತಿಯನ್ನು ಅರಿತುಕೊಂಡ ಯಡಿಯೂರಪ್ಪ ಬಣ, ಈ ಹಿಂದೆ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪಸಿಂಹ ಸೀಟಿಗೂ ಕತ್ತರಿ ಹಾಕಲು ಮುಂದಾಗಿದ್ದಾರೆ. ಇದರೊಂದಿಗೆ ತನ್ನ ಸೀಟು ಗಟ್ಟಿ ಎಂದು ದೆಹಲಿಯಲ್ಲಿ ಓಡಾಡಿಕೊಂಡಿದ್ದ ಪ್ರತಾಪಸಿಂಹ ಬುಡಕ್ಕೆ ಈಗ ನೀರು ಬಂದಿದೆ.

S. R. Mahesh Profile: ಹ್ಯಾಟ್ರಿಕ್‌ ಗೆಲುವಿನ ಸರದಾರ ಶಾಸಕ ಸಾ.ರಾ ಮಹೇಶ್‌ ವ್ಯಕ್ತಿ  ಪರಿಚಯ | S. R. Mahesh Age, Biography, Education, Family, Net Worth &  Political Career Details - Kannada Oneindia

ಇದಲ್ಲದೆ, ಸಾರಾ ಮಹೇಶ್ ಮೂಲತಃ ಬಿಜೆಪಿಯವರಾಗಿರುವುದರಿಂದ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ, ಮೈಸೂರಿನ ಮತ್ತೊಬ್ಬ ಪ್ರಭಾವಿ ಒಕ್ಕಲಿಗ ಮತ್ತು ಜೆಡಿಎಸ್ ನಾಯಕ ಜಿಟಿ ದೇವೇಗೌಡ ಅವರೂ ಪ್ರತಾಪಸಿಂಹ ಬದಲಿಸುವ ಈ ನೀತಿಗೆ ಸಹಮತ ತೋರಲಿದ್ದಾರೆ. ಜೆಡಿಎಸ್ ಕೂಡ ಮೂರು ಕ್ಷೇತ್ರದ ಜೊತೆಗೆ ನಾಲ್ಕನೇ ಸ್ಥಾನ ಸಿಗುತ್ತೆ ಎನ್ನುವಾಗ ಬೇಡ ಅನ್ನಲಿಕ್ಕಿಲ್ಲ. ಕುಮಾರಸ್ವಾಮಿ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿಯೇ ಯಡಿಯೂರಪ್ಪ ಈ ದಾಳ ಉರುಳಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಈ ಬಗ್ಗೆ ಸಾರಾ ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಮಾತುಕತೆ ಆಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಪ್ರಮುಖರು ನನ್ನ ಜೊತೆಗೆ ಮಾತಾಡಿದ್ದಾರೆ. ಆದರೆ ನನಗೆ ಕುಮಾರಸ್ವಾಮಿ ಮಾತೇ ಅಂತಿಮ. ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ಜೆಡಿಎಸ್ ಗೆ ಹಾಸನ, ತುಮಕೂರು, ಕೋಲಾರ, ಮಂಡ್ಯ ಪೈಕಿ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಲು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆಯಾಗಿದೆ. ಇದೀಗ ಮೈಸೂರು ಕ್ಷೇತ್ರದ ಬಗ್ಗೆ ಹೊಸ ಬೆಳವಣಿಗೆ ಆಗಿದ್ದು, ಎರಡು ಬಾರಿಯ ಎಂಪಿ, ಮಾಜಿ ಪತ್ರಕರ್ತ ಪ್ರತಾಪಸಿಂಹಗೂ ಟಿಕೆಟ್ ತಪ್ಪುವ ಸಾಧ್ಯತೆ ಕಂಡುಬಂದಿದೆ. ಇದರಿಂದ ಜೆಡಿಎಸ್ ಡಬಲ್ ಧಮಾಕಾ ಅಂದುಕೊಂಡರೆ, ಯಡಿಯೂರಪ್ಪ ಪಾಳಯ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ಲಾನಲ್ಲಿದೆ.

Big surgery in Mysuru BJP, chances of Prathap Simha losing his MP ticket, the reason is they want to field jds candidate for Mysuru MP. Sa ra mahesh in MP race for the assembly elections of 2024