Serial killer Umesh Reddy; ನಟೋರಿಯಸ್ ಕ್ರಿಮಿನಲ್, ಸರಣಿ ಅತ್ಯಾಚಾರ ಆರೋಪಿ ಉಮೇಶ್ ರೆಡ್ಡಿಗೆ ಅನಾರೋಗ್ಯ ; ಜೈಲಿಂದ ಹೊರ ಬಂದ್ರೆ ಕಾದಿದೆ ಅಪಾಯ, ಪೆರೋಲ್ ನೀಡಲು ನಿರಾಕರಿಸಿದ ಹೈಕೋರ್ಟ್

27-02-24 11:24 am       Bangalore Correspondent   ಕರ್ನಾಟಕ

ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರು, ಫೆ 27: ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಉಮೇಶ್ ರೆಡ್ಡಿ, ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು 30 ದಿನಗಳ ಕಾಲ ಪೆರೋಲ್ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಆಸ್ಪಾಕ್ ವಿರುದ್ಧದ ರಾಜಸ್ಥಾನ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಿಗೆ ಪೆರೋಲ್ ನೀಡಬೇಕಾದಲ್ಲಿ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಅರ್ಜಿದಾರರಿಗೆ ಪೆರೋಲ್ ನೀಡಿದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಿರಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಜೈಲು ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿರುವ ಸುಪ್ರೀಂಕೋರ್ಟ್ ಅರ್ಜಿದಾರರು ಜೈಲಿನಿಂದ ಹೊರ ಬಂದಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಮನೆ ದುರಸ್ತಿಯಲ್ಲಿದ್ದು ಅದನ್ನು ಸರಿಪಡಿಸುವುದಕ್ಕಾಗಿ ಪೆರೋಲ್ ನೀಡಬೇಕು ಎಂದು ಅರ್ಜಿದಾರರ ಮತ್ತೊಂದು ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಇಬ್ಬರು ಸಹೋದರರಿದ್ದು, ತಾಯಿಯನ್ನು ನೋಡಿಕೊಳ್ಳುತ್ತಾರೆ. ಮನೆ ದುರಸ್ತಿಯನ್ನೂ ಮಾಡುತ್ತಾರೆ. ಅರ್ಜಿದಾರರ ನೀಡಿರುವ ಎರಡೂ ಕಾರಣಗಳಲ್ಲಿ ಸಮರ್ಥವಾಗಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಉಮೇಶ್ ರೆಡ್ಡಿ ಯಾರು? 

1998ರ ಪೆಬ್ರವರಿ 28 ರಂದು ಬೆಂಗಳೂರು ನಗರದಲ್ಲಿ ನಡೆದಿದ್ದ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಸುಪ್ರೀಂಕೋರ್ಟ್ ಮಾರ್ಪಾಡು ಮಾಡಿ ಆದೇಶಿಸಿತ್ತು. ಅಲ್ಲದೇ, ನ್ಯಾಯಾಲಯಕ್ಕೆ ಪೆರೋಲ್ ಸೇರಿದಂತೆ ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕು ಎಂದಾದರೆ ಕನಿಷ್ಠ 30 ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಈ ನಡುವೆ ಪೆರೋಲ್ ನೀಡಬೇಕು ಎಂದು ಉಮೇಶ್ ರೆಡ್ಡಿ ಜೈಲು ಅಧಿಕಾರಿಗಳನ್ನು ಕೋರಿದ್ದ. ಆದರೆ, 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವವರೆಗೂ ಯಾವುದೇ ವಿನಾಯ್ತಿ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ ಎಂದು ತಿಳಿಸಿ ಅರ್ಜಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

1969ರಲ್ಲಿ ಚಿತ್ರದುರ್ಗದಲ್ಲಿ ಬಿಎ ಉಮೇಶ್‌ ಹೆಸರಿನಲ್ಲಿ ಜನಿಸಿದ ಉಮೇಶ್‌ ರೆಡ್ಡಿ, ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆಗೆ ಸೇರಿಕೊಂಡ. ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ ಉಮೇಶ್ ರೆಡ್ಡಿ, ಬಳಿಕ ಪೊಲೀಸ್‌ ಆಗಿದ್ದ. ನಡುವೆ ಹತ್ತಾರು ಕೆಲಸಗಳನ್ನು ಮಾಡಿಕೊಂಡಿದ್ದ ಈತ ಮಾಡಿರುವುದು ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ. 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟವಲ್ಲದೆ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಪರಿಚಯವೇ ಆಗಿಲ್ಲ ಎನ್ನುವುದು ಪೊಲೀಸರ ಮಾತು.

The High Court of Karnataka has declined to release serial rapist and killer B.A. Umesh Reddy on parole in one of the rape and murder case, in which he is undergoing imprisonment for life at Bengaluru central prison after his death sentence was commuted to imprisonment for life by the apex court in 2022.