Haveri, Farmers protest: ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ ; ಹಾವೇರಿ ರೈತರು ಕೆಂಡಾಮಂಡಲ, ರಣಾಂಗಣವಾದ ಮಾರುಕಟ್ಟೆ, ಎಪಿಎಂಸಿ ಕಚೇರಿ ಧ್ವಂಸ, ಪೊಲೀಸರಿಗೂ ಥಳಿತ

12-03-24 12:10 pm       HK News Desk   ಕರ್ನಾಟಕ

ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಬ್ಯಾಡಗಿ ಪಟ್ಟಣದಲ್ಲಿ ಎಪಿಎಂಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ದಾಂಧಲೆ ಮಾಡಿದ್ದು, ಈ ವೇಳೆ ಉದ್ರಿಕ್ತಗೊಂಡ ರೈತರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದರು.

ಹಾವೇರಿ, ಮಾ 12: ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಬ್ಯಾಡಗಿ ಪಟ್ಟಣದಲ್ಲಿ ಎಪಿಎಂಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ದಾಂಧಲೆ ಮಾಡಿದ್ದು, ಈ ವೇಳೆ ಉದ್ರಿಕ್ತಗೊಂಡ ರೈತರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಪರಿಣಾಮ 6 ಕಾರು, ಒಂದು ಅಗ್ನಿಶಾಮಕ ದಳ ವಾಹನ, 6 ಬೈಕ್ ಸೇರಿದಂತೆ ಆಡಳಿತ ಕಚೇರಿ ಸುಟ್ಟು ಭಸ್ಮವಾಗಿದೆ. ಇನ್ನು ಘಟನೆ ಸಂಬಂಧ ಪೊಲೀಸರು 47 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

1000ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿ ; 

ಸದ್ಯ ಹಾವೇರಿ ಎಪಿಎಂಸಿ ಕಚೇರಿ ಬಳಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇದೆ. ಘಟನಾ ಸ್ಥಳಕ್ಕೆ ಐಜಿ ತ್ಯಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದ್ದು ಸ್ಥಳದಲ್ಲಿ ಸ್ಥಳದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಪೋಲಿಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಸುಮಾರು 1000ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ. ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಸ್ಥಳದಿಂದ ಓಡುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ತಮಗೆ ಅಪಾಯ ಆಗಬಹುದೆಂಬ ಭೀತಿಯಿಂದ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ.

ಗೃಹ ಸಚಿವರು ಹೇಳಿದ್ದೇನು?

ಬ್ಯಾಡಗಿ ಮಾರುಕಟ್ಟೆ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಒಂದೇ ದಿನ 20 ಸಾವಿರದಿಂದ 8 ಸಾವಿರಕ್ಕೆ ಬೆಲೆ ಕುಸಿತ ಆಗಿದೆ. ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಕಾರಣ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ತೀವಿ ಅಂತ ಹೇಳಿದ್ದಾರೆ.

ಇನ್ನು, ಹಾವೇರಿಯ ಬ್ಯಾಡಗಿ ಎಪಿಎಂಸಿಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಸಿಕ್ಕ ಸಿಕ್ಕ ರೈತರನ್ನು ಹಿಡಿದು ರೋಡಲ್ಲಿ ಸಾಲಗಿ ಕೂರಿಸಿದ ಘಟನೆ ನಡೆದಿದೆ. ನಾವು ಅಮಾಯಕರು ನಮ್ಮನ್ನು ಬಿಟ್ಟುಬಿಡಿ ಸಾರ್ ಎಂದು ರೈತರು ಗೊಗರೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಮುಂದೆ ನಾವಲ್ಲ ಸರ್ ಎನ್ನುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಾರ್ ಸಾರ್, ನಾವು ರೈತರು ಸರ್ ಯಾರೋ ಮಾಡಿದ ತಪ್ಪಿಗೆ ನಮ್ಮನ್ ಯಾಕ್ ಹಿಡಿದಿರಿ ಸಾರ್ ಎಂದು ಜಿಲ್ಲಾಧಿಕಾರಿ ಮತ್ತು ಎಸ್ಪಿ ಕಂಡು ಓಡಿ ಬಂದಿದ್ದಾರೆ ರೈತರು.

ಪ್ರತಿಭಟನೆ ವೇಳೆ ಕಳ್ಳರ ಕೈಚಳಕ ;

ಬ್ಯಾಡಗಿ ಎಪಿಎಂಸಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಳ್ಳರು ಲಾಭ ಮಾಡ್ಕೊಂಡಿದ್ದಾರೆ. ಕೆಲ ಅಂಗಡಿಗಳಿಗೆ ನುಗ್ಗಿ ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಜಗದೀಶ್ ಎಂಬುವವರಿಗೆ ಸೇರಿದ ಮೋಹನ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ಕಳ್ಳತನ ನಡೆದಿದೆ. ಬೀಗ ಮುರಿದು ಲ್ಯಾಪ್‌ಟಾಪ್ ಒಡೆದು ಸಾಮಾಗ್ರಿಗಳ ಧ್ವಂಸ ಮಾಡಿ ಹಣ ಕಳವು ಮಾಡಿದ್ದಾರೆ.

A group of farmers vandalised an APMC (Agricultural Produce Market Committee) mandi in Karnataka's Haveri district over falling prices of chilly. The farmers threw stones at the APMC building and gutted three vehicles.