Sumalatha Ambarish, Muniswami: ಸುಮಲತಾ ಅಂಬರೀಶ್, ಮುನಿಸ್ವಾಮಿಗೆ ಬಿಗ್ ಶಾಕ್ ; ದಳಪತಿಗಳಿಗೆ ಮೂರು ಸೀಟ್ ಫಿಕ್ಸ್, ಮಂಡ್ಯ, ಕೋಲಾರ, ಹಾಸನ ಕಡೆಗೂ ಅಂತಿಮ 

14-03-24 03:00 pm       Bangalore Correspondent   ಕರ್ನಾಟಕ

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೂರು ಲೋಕಸಭೆ ಕ್ಷೇತ್ರಗಳನ್ನು ಅಂತಿಮಗೊಳಿಸಿದೆ. ಕೋಲಾರ, ಮಂಡ್ಯ, ಹಾಸನ ಕ್ಷೇತ್ರ ಜೆಡಿಎಸ್ ಪಾಲಾಗಿದೆ. 

ಬೆಂಗಳೂರು, ಮಾ.14: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೂರು ಲೋಕಸಭೆ ಕ್ಷೇತ್ರಗಳನ್ನು ಅಂತಿಮಗೊಳಿಸಿದೆ. ಕೋಲಾರ, ಮಂಡ್ಯ, ಹಾಸನ ಕ್ಷೇತ್ರ ಜೆಡಿಎಸ್ ಪಾಲಾಗಿದೆ. 

ಜೆಡಿಎಸ್​ ಕನಿಷ್ಠ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್​ ಅಳೆದು ತೂಗಿ ಅಂತಿಮವಾಗಿ ಜೆಡಿಎಸ್​ಗೆ ನಿರೀಕ್ಷೆಯಂತೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಹಾಸನದಲ್ಲಿ ಈಗಾಗಲೇ ಜೆಡಿಎಸ್​ನ ಪ್ರಜ್ವಲ್ ರೇವಣ್ಣ ಸಂಸದರಿದ್ದು, ಅವರೇ ಮತ್ತೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪಕ್ಷೇತರ ಸಂಸದೆ ಸುಮಲತಾ ಪ್ರತಿನಿಧಿಸುತ್ತಿದ್ದ ಮಂಡ್ಯವನ್ನು ಜೆಡಿಎಸ್​ ಮರಳಿ ಭದ್ರಕೋಟೆಯಾಗಿದ್ದ ಯಶಸ್ವಿಯಾಗಿದೆ. ಬಿಜೆಪಿ ಹಾಲಿ ಸಂಸದ ಇರುವ ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಈ ಬಾರಿ ಟಿಕೆಟ್​ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಮಂಡ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್​ಗೆ ನಿರಾಸೆಯಾಗಿದ್ದು, ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. 

ಜೆಡಿಎಸ್​ ಮಂಡ್ಯ ಕ್ಷೇತ್ರದಿಂದ ಸಿಎಸ್ ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಖುದ್ದು ಕುಮಾರಸ್ವಾಮಿ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಹೇಳಿತ್ತು. ಆದ್ರೆ, ಎಚ್​ಡಿಕೆ ಪುಟ್ಟರಾಜು ಅವರನ್ನ ಅಂತಿಮಗೊಳಿಸಿದ್ದಾರೆ. ಹಾಸನದಲ್ಲಿ ನಿರೀಕ್ಷೆಯಂತೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಪಕ್ಕಾ ಆಗಿದೆ. ಆದ್ರೆ, ಕೋಲಾರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಮೂಲಗಳ ಪ್ರಕಾರ ಶಾಸಕ ಸಮೃದ್ಧಿ ಮಂಜುನಾಥ್​ ಅವರನ್ನು ಅಖಾಡಕ್ಕಿಳಿಸಲು ಜೆಡಿಎಸ್​ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. 

ಜೆಡಿಎಸ್​ ಕೋಟಾದಲ್ಲಿ ಇರುವ ಈ ಮೂರು ಕ್ಷೇತ್ರಗಳು ಒಕ್ಕಲಿಗರ ಭದ್ರಕೋಟೆಗಳಾಗಿವೆ. ಒಕ್ಕಲಿಗರ ಮೇಲೆ ಜೆಡಿಎಸ್​ಗೆ ಹಿಡಿತವಿದೆ. ಅಲ್ಲದೇ ಕುಮಾರಸ್ವಾಮಿ ಮತ್ತು ದೇವೇಗೌಡ ಒಕ್ಕಲಿಗ ಸಮುದಾಯದ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್ ಅವರು ಪ್ರಬಲ ಒಕ್ಕಲಿಗ ನಾಯಕ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮ ಬೆಂಬಲವನ್ನು ವಿಭಜಿಸಿದ ಪರಿಣಾಮ ಜೆಡಿಎಸ್​​ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರು ಯಾವ ರೀತಿ ಮತ ಚಲಾಯಿಸುತ್ತಾರೆ ಎಂಬುವುದರ ಮೇಲೆ ಫಲಿತಾಂಶ ನಿಂತಿದೆ.

Big Shock for Sumalatha Ambarish and Muniswami,  Mandya, Kolar, Hassan list finalised.