Mandya MP Sumalatha Ambareesh, meeting: ನನಗೆ ನನ್ನ ಮಂಡ್ಯ ಜನರೇ ಮುಖ್ಯ ;  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ, ಏಪ್ರಿಲ್‌ 3ಕ್ಕೆ ಅಂತಿಮ ತೀರ್ಮಾನ 

30-03-24 05:33 pm       Bangalore Correspondent   ಕರ್ನಾಟಕ

ಕಳೆದ ಸಲದ ಚುನಾವಣೆ ವೇಳೆ ಸೃಷ್ಟಿಯಾಗಿದ್ದ ಸನ್ನಿವೇಶವೇ ಈ ಸಲವೂ ಸೃಷ್ಟಿಯಾಗಿದೆ. ನಾನು ಪಕ್ಷಕ್ಕಿಂತ ಅಂಬರೀಶ್‌ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.

ಬೆಂಗಳೂರು, ಮಾ.29: ಕಳೆದ ಸಲದ ಚುನಾವಣೆ ವೇಳೆ ಸೃಷ್ಟಿಯಾಗಿದ್ದ ಸನ್ನಿವೇಶವೇ ಈ ಸಲವೂ ಸೃಷ್ಟಿಯಾಗಿದೆ. ನಾನು ಪಕ್ಷಕ್ಕಿಂತ ಅಂಬರೀಶ್‌ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಏಪ್ರಿಲ್‌ 3 ರಂದು ಮಂಡ್ಯದಲ್ಲಿಯೇ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಮಂಡ್ಯದ ಪಕ್ಷೇತರೆ ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ

ಬೆಂಗಳೂರಿನ ಜೆಪಿ ನಗರದ ನಿವಾಸದ ಬಳಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ನಮ್ಮ ಬೆಂಬಲಿಗರು, ಅಂಬರೀಶ್‌ ಅವರ ಅಭಿಮಾನಿಗಳು ಇಲ್ಲಿಗೆ ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಸಹ ನಾನು ಜನಾಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಹೆಜ್ಜೆ ಇಟ್ಟಿದ್ದೇನೆ. ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಕೂಡ ನಮ್ಮ ಆಪ್ತ ವಲಯದಲ್ಲಿ ಚರ್ಚೆ ಮಾಡಿ ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ಘೋಷಣೆ ಮಾಡುತ್ತೇನೆ ಎಂದರು.

ನಿಮ್ಮ ಅಭಿಮಾನಿಗಳು ಚುನಾವಣೆಗೆ ನಿಲ್ಲಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿಯೂ ಇದೇ ರೀತಿಯ ಸವಾಲು ಎದುರಾಗಿತ್ತು. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಆಗ ನಿಮಗೆ ಟಿಕೆಟ್‌ ಕೊಡುವುದಿಕ್ಕೆ ಆಗಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಈಗ ಅದೇ ಸವಾಲು ಬದಲಾದ ರೀತಿಯಲ್ಲಿ ನಮ್ಮ ಮುಂದೆ ಬಂದಿದೆ. ಇದನ್ನು ಯಾವ ರೀತಿ ನಾವು ಎದುರಿಸಬೇಕು ಎಂಬ ಪ್ರಶ್ನೆ ನನ್ನ ಮುಂದಿದೆ. ಮುಂದಿನ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿಲ್ಲ ಎಂದರು.

ಮೊನ್ನೆಯವರೆಗೂ ನಮ್ಮ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ಇತ್ತು. ಬಿಜೆಪಿ ನಾಯಕರು ಕೂಡ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ, ಬಿಜೆಪಿ ಈಗ ತೆಗೆದುಕೊಂಡಿರೋ ನಿರ್ಧಾರದಲ್ಲಿ ನಮ್ಮ ಭವಿಷ್ಯ ಏನು? ನಮ್ಮನ್ನು ನಂಬಿಕೊಂಡಿರೋ ಜನರ ಭವಿಷ್ಯ ಏನು? ಎಂಬುದು ಮುಖ್ಯ ಆಗುತ್ತದೆ. ನಾನು ಬಿಜೆಪಿ ನಾಯಕರ ಜೊತೆ ಮಾತನಾಡಿದಾಗಲೂ ನನಗೆ ನನ್ನ ಭವಿಷ್ಯ ಮುಖ್ಯ ಅಲ್ಲ, ನನ್ನನ್ನು ನಂಬಿಕೊಂಡಿರೋ ಅಭಿಮಾನಿಗಳನ್ನು ಕಾಪಾಡಬೇಕಾದ ಕರ್ತವ್ಯ, ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.

ಬಿಜೆಪಿಯಿಂದ ಉನ್ನತ ಸ್ಥಾನಮಾನದ ಆಫರ್‌ ಬಂದಿದೆ!

ಬಿಜೆಪಿಯಿಂದ ಸ್ಥಾನಮಾನದ ಆಫರ್‌ ಏನಾದ್ರೂ ಸಿಕ್ಕಿದಿಯಾ ಎಂಬ ಪ್ರಶ್ನೆಗೆ, ಬಿಜೆಪಿ ನಾಯಕರು ಹಾಗೂ ಶುಕ್ರವಾರ ಬಿವೈ ವಿಜಯೇಂದ್ರ ಅವರು ಭೇಟಿಯಾದಾಗ ನಿಮಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ. ನಮಗೆ ಸಹಕಾರ ಕೊಟ್ಟರೆ ಉನ್ನತ ಸ್ಥಾನಮಾನ ನೀಡುವ ಚಿಂತನೆ ಇದೆ. ಹೈಕಮಾಂಡ್‌ ಈ ಬಗ್ಗೆ ಮಾಹಿತಿ ನೀಡಿದೆ, ನೀವು ಯಾವುದಕ್ಕೂ ಕಳವಳ ವ್ಯಕ್ತಪಡಿಸಬೇಕಿಲ್ಲ. ನಾವೆಲ್ಲಾ ನೋಡ್ಕೋತಿವಿ. ನಿಮ್ಮ ಬೆಂಬಲಿಗರು, ಕಾರ್ಯಕರ್ತರನ್ನು ಕೈ ಬಿಡಲ್ಲ ಎಂದು ಹೇಳಿದ್ದರು ಎಂದು ತಿಳಿಸಿದರು.

ಇನ್ನು, ಜೆಪಿ ನಡ್ಡಾ ಅವರಿಗೂ ಕೂಡ ನನ್ನ ಭವಿಷ್ಯವೇನೋ ನೀವು ನೋಡ್ಕೋತಿರಿ. ನನ್ನ ಬೆಂಬಲಿಗರ ಭವಿಷ್ಯ, ಕಾರ್ಯಕರ್ತರ ಭವಿಷ್ಯ ಏನಾಗಬೇಕು ಎಂದು ಕೇಳಿದ್ದೆ. ಅದಕ್ಕೆ ಅವರು ನೀವು ಹೇಳಿದ ರೀತಿಯೇ ಮಾಡೋಣ ಎಂದಿದ್ದರು. ಆದರೂ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲಿಗರ ಅಭಿಪ್ರಾಯವನ್ನು ಕೇಳಿಯೇ ಹೆಜ್ಜೆ ಇಡಬೇಕು ಎಂದು ನಿರ್ಧರಿಸಿ ಸಭೆ ಕರೆದಿದ್ದೇನೆ. ಮಂಡ್ಯದಲ್ಲಿ ಸಭೆಯನ್ನು ನಡೆಸಿದ ಬಳಿಕ ಏಪ್ರಿಲ್‌ 3ರಂದು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಈ ಪಕ್ಷಕ್ಕೆ ಅನುಕೂಲ ಆಗುತ್ತಾ? ಆ ಪಕ್ಷಕ್ಕೆ ಅನುಕೂಲ ಆಗುತ್ತಾ? ಅಥವಾ ಈ ನಾಯಕರ ಜೊತೆ ಇರಬೇಕು ಎಂದು ನಾನು ನನ್ನ ನಿರ್ಧಾರ ಮಾಡಲ್ಲ. ನನ್ನ ನಂಬಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದ ಅವರು, ಬಿಜೆಪಿಯಿಂದ ಪಕ್ಷ ಸೇರಲು ನನಗೆ ಆಹ್ವಾನ ಬಂದಿದೆ. ಜೊತೆಗೆ ಯಾರೇ ಬಂದು ನನ್ನನ್ನು ಭೇಟಿ ಮಾಡಬಹುದು, ಅದಕ್ಕೆ ವಿರೋಧ ಏನಿಲ್ಲ ಎಂದು ಹೇಳಿದರು.

Mandya MP Sumalatha Ambareesh likely to stand independent, April 3rd to have final decision. Huge followers have gathered at her residence supporting her to spend independent