Shivamogga Eshwarappa Election defeat; ಅಪ್ಪ, ಮಗನ ವಿರುದ್ಧ ತೊಡೆ ತಟ್ಟಿದ್ದ ಈಶ್ವರಪ್ಪಗೆ ಮುಖಭಂಗ, ನೀನು ಬೇಡ ಪತ್ನಿ ಸಾಕು ಎಂದಿದ್ದೇ ದಾವಣಗೆರೆಯಲ್ಲಿ ಕಮಲಕ್ಕೆ ಮುಳುವು..! 26 ವರ್ಷಗಳ ಬಳಿಕ ಮೀಸೆ ತಿರುವಿದ ಶಾಮನೂರು, ಕಾಗೇರಿ ಗೆಲುವು ಕಸಿಯದ ಅನಂತ ಸಿಟ್ಟು !

04-06-24 09:13 pm       Shivamogga HK Correspondent   ಕರ್ನಾಟಕ

ತನ್ನ ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಅಪ್ಪ, ಮಗನ ವಿರುದ್ಧ ತೊಡೆ ತಟ್ಟಿದ್ದಲ್ಲದೆ, ಯಡಿಯೂರಪ್ಪ ಮಗ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೀನಾಯ ಸೋಲುಂಡಿದ್ದಾರೆ.

ಶಿವಮೊಗ್ಗ, ಜೂನ್ 4: ತನ್ನ ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಅಪ್ಪ, ಮಗನ ವಿರುದ್ಧ ತೊಡೆ ತಟ್ಟಿದ್ದಲ್ಲದೆ, ಯಡಿಯೂರಪ್ಪ ಮಗ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೀನಾಯ ಸೋಲುಂಡಿದ್ದಾರೆ. ರಾಘವೇಂದ್ರ 2.43 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದರೆ, ಈಶ್ವರಪ್ಪ ಕೇವಲ 30050 ಮತಗಳನ್ನಷ್ಟೇ ಗಳಿಸಿ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ 7,78,721 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ 5,35,006 ಮತಗಳನ್ನು ಪಡೆದಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಕುಟುಂಬಕ್ಕೆ ಡಿಚ್ಚಿ ಹೊಡೆಯುತ್ತೇನೆಂದು ಬಂಡಾಯ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ 30050 ಮತಗಳನ್ನಷ್ಟೇ ಪಡೆದಿದ್ದಾರೆ. ರಾಘವೇಂದ್ರ ಗೆಲುವಿನ ಅಂತರ 2,43,715 ಮತಗಳಾಗಿದ್ದು, ಶಿವಮೊಗ್ಗದ ಜನರು ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.

ಕಾಗೇರಿಗೆ ಗೆಲುವಿಗೆ ಅಡ್ಡಿಯಾಗದ ಅನಂತ

ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಲಿ ಸಂಸದರಾಗಿದ್ದ ಅನಂತ ಕುಮಾರ್ ಅಸಹಕಾರದ ನಡುವೆಯೂ ಬರೋಬ್ಬರಿ 3,37,919 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ 4,43,494 ಮತಗಳನ್ನು ಗಳಿಸಿದ್ದಾರೆ. ಕಾಗೇರಿ ಪರವಾಗಿ 7,81,413 ಮತಗಳು ಬಿದ್ದಿವೆ. 10,139 ಮತಗಳು ನೋಟಾ ಪರವಾಗಿ ಬಿದ್ದಿರುವುದು ವಿಶೇಷ.

ಕಳೆದ ಬಾರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಅನಂತ ಕುಮಾರ್ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಹಿಂದಿನ ಅಂತರಕ್ಕೆ ಹೋಲಿಸಿದರೆ, ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದೆ. ಆದರೆ, ಟಿಕೆಟ್ ತಪ್ಪಿದ ಸಿಟ್ಟಿನಲ್ಲಿ ಅನಂತ ಕುಮಾರ್ ಪಕ್ಷದ ಪರವಾಗಿ ಪ್ರಚಾರಕ್ಕೂ ಬಾರದೆ ದೂರ ನಿಂತಿದ್ದರು. ಕೊನೆಗೆ, ತನ್ನದೇ ಹೆಸರಿನಲ್ಲಿ ಬಂದಿದ್ದ ಜಾಲತಾಣದ ಪೋಸ್ಟ್ ವಿರೋಧಿಸಿ ಪೊಲೀಸು ಕೇಸು ನೀಡಿದ್ದರು. ಸಿಟ್ಟು ಶಮನಕ್ಕೆ ಹೋಗಿದ್ದ ರಾಜ್ಯ ಬಿಜೆಪಿ ಮುಖಂಡರನ್ನು ಬೈದು ಕಳಿಸಿದ್ದರಿಂದ ಕಾಗೇರಿ ಗೆಲುವು ಕಷ್ಟ ಎನ್ನುವ ಭಾವನೆ ವ್ಯಕ್ತವಾಗಿತ್ತು.

ಸಿದ್ದೇಶ್ವರ್ ವಿರುದ್ಧ ಮೀಸೆ ತಿರುವಿದ ಶಾಮನೂರು

ಬಿಜೆಪಿ ಭದ್ರಕೋಟೆ ಎಂಬಂತಿದ್ದ ದಾವಣಗೆರೆಯಲ್ಲಿ ಕೇಸರಿ ಕೋಟೆಗೆ ಕಾಂಗ್ರೆಸ್ ಲಗ್ಗೆ ಇಟ್ಟಿದೆ. ಹಾಲಿ ಸಂಸದರಾಗಿದ್ದ ಜಿಎಂ ಸಿದ್ದೇಶ್ವರ್ ಬದಲು ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ಕೊಟ್ಟಿದ್ದೇ ಮುಳುವಾಗಿದೆ. ಎದುರಾಳಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಹಾಲಿ ಸಚಿವರೂ ಆಗಿರುವ ಮಗ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ 26094 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಪ್ರಭಾ ಅವರು 633059 ಮತಗಳನ್ನು ಪಡೆದಿದ್ದರೆ, ಗಾಯತ್ರಿ ಸಿದ್ದೇಶ್ವರ್ 606965 ಮತಗಳನ್ನು ಗಳಿಸಿದ್ದಾರೆ. 26 ವರ್ಷಗಳ ಬಳಿಕ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದು ಆಮೂಲಕ ಹಿರಿಯಜ್ಜ ಶಾಮನೂರು ಕುಟುಂಬಸ್ಥರು ಮೀಸೆ ತಿರುವಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿಗಳಾಗಿರುವ ಸಿದ್ದೇಶ್ವರ್ ಮತ್ತು ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ರಾಜಕೀಯ ಎದುರಾಳಿಗಳಾಗಿದ್ದಾರೆ.

Former minister K.S. Eshwarappa, who contested as an independent candidate in Shivamogga Lok Sabha seat, has lost his deposit.He secured 30,050 votes (2.18%) of the 13.7 lakh votes polled in the election held on May 7. As the votes he got were far less than one-sixth of the total votes polled, he will lose the deposit amount paid at the time of filing his nomination papers.