VRL Vijay Sankeshwar daughter husband, crime: ಉದ್ಯಮಿ ವಿಜಯ ಸಂಕೇಶ್ವರ ಅಳಿಯನ ಮೇಲೆ ವಾಮಾಚಾರ, ದಿಢೀರ್ ಸಾವಿನ ಬಗ್ಗೆ ಪುತ್ರಿ ದೂರು, ಮಾಜಿ ಸಂಸದ ಎಸ್.ಬಿ. ಸಿದ್ನಾಳ ಕುಟುಂಬ ಕಲಹ ಬೀದಿಗೆ, ಆಸ್ತಿ ಕಬಳಿಸಲು ಹುನ್ನಾರ ಮಾಡಿದ್ನಾ ಸೋದರ ?

02-07-24 09:58 pm       HK News Desk   ಕರ್ನಾಟಕ

ಬೆಳಗಾವಿ ಮಾಜಿ ಸಂಸದ ಎಸ್.ಬಿ ಸಿದ್ನಾಳ ಕುಟುಂಬದ ಜಗಳ ಬೀದಿಗೆ ಬಂದಿದ್ದು, ಇವರ ಸೊಸೆ, ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ತನ್ನ ಗಂಡನ ಸಾವಿನ ವಿಚಾರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆಳಗಾವಿ, ಜುಲೈ.2: ಬೆಳಗಾವಿ ಮಾಜಿ ಸಂಸದ ಎಸ್.ಬಿ ಸಿದ್ನಾಳ ಕುಟುಂಬದ ಜಗಳ ಬೀದಿಗೆ ಬಂದಿದ್ದು, ಇವರ ಸೊಸೆ, ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ತನ್ನ ಗಂಡನ ಸಾವಿನ ವಿಚಾರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಕುಟುಂಬದ ಆಸ್ತಿಯನ್ನು ಕಬಳಿಸುವ ಉದ್ದೇಶದಲ್ಲಿ ತನ್ನ ಗಂಡನ ವಿರುದ್ಧವೇ ಮಾಟ, ಮಂತ್ರ ನಡೆಸಿದ್ದಾರೆಂದು ಸಂಕೇಶ್ವರ ಪುತ್ರಿ ದೀಪಾ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮಾಜಿ ಸಂಸದ ಎಸ್.ಬಿ. ಸಿದ್ನಾಳ ಅವರ ಕಿರಿಯ ಪುತ್ರ ಶಿವಕಾಂತ ಸಿದ್ನಾಳ ಜೊತೆಗೆ ವಿಜಯ ಸಂಕೇಶ್ವರ ಕಿರಿಯ ಪುತ್ರಿ ದೀಪಾ ಮದುವೆ ಆಗಿತ್ತು. 2002ರಲ್ಲಿ ಇವರ ಮದುವೆ ಆಗಿದ್ದು, 2006ರಲ್ಲಿ ವಿಜಯ ಸಂಕೇಶ್ವರ ಪಾಲುದಾರಿಕೆಯಲ್ಲಿ ಶಿವಕಾಂತ ಸಿದ್ನಾಳ ಹಾಲಿನ ಡೇರಿ ಆರಂಭಿಸಿದ್ದರು. ವಿಜಯಕಾಂತ ಹೆಸರಿನಲ್ಲಿ ಹಾಲಿನ ಡೇರಿ ಆರಂಭಿಸಿದ್ದು, ಬಳಿಕ ಆದಿತ್ಯ ಮಿಲ್ಕ್ ಪ್ರಾಡಕ್ಟ್ ಹೆಸರಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ರೈತರಿಂದ ಹಾಲು ಸಂಗ್ರಹಿಸಿ ಕೋಟ್ಯಂತರ ಆಸ್ತಿಯ ಮಿಲ್ಕ್ ಬ್ರಾಂಡ್ ಕಂಪನಿ ಸ್ಥಾಪಿಸಿದ್ದರು.  

ಇತ್ತೀಚೆಗೆ ಶಿವಕಾಂತ ಸಿದ್ನಾಳ ಹಠಾತ್ತಾಗಿ ನಿಧನರಾಗಿದ್ದು, ಇದರ ಹಿಂದೆ ದೊಡ್ಡ ಮಗ ಶಶಿಕಾಂತ ಸಿದ್ನಾಳ ಅವರ ಕುಟುಂಬದ ಪಿತೂರಿ ಇದೆಯೆಂದು ಆರೋಪಿಸಿ ದೀಪಾ ಪೊಲೀಸ್ ದೂರು ನೀಡಿದ್ದಾರೆ. ಶಿವಕಾಂತ ಸಿದ್ನಾಳ ಸಾವಿನ ಬಳಿಕವೂ ಅವರ ಸಮಾಧಿ ಮೇಲೆ ಮಾಟ ಮಂತ್ರ ಮಾಡಿರುವುದು ಕಂಡುಬಂದಿದ್ದು, ದುಷ್ಕರ್ಮಿಗಳ ಕುತಂತ್ರದಿಂದಾಗಿಯೇ ಗಂಡನ ಸಾವಾಗಿದೆ ಎಂದು ದೀಪಾ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಶಿಕಾಂತ ಸಿದ್ನಾಳ, ಅವರ ಪತ್ನಿ ವಾಣಿ ಸಿದ್ನಾಳ, ಮಗ ದಿಗ್ವಿಜಯ ಸಿದ್ನಾಳ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೆಗನಹಾಳ ಗ್ರಾಮದಲ್ಲಿರುವ ವಿಜಯಕಾಂತ ಡೇರಿಯಲ್ಲಿ ನಿತ್ಯ 1.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಹಾಲಿನ ಡೇರಿಯಾಗಿ ಖ್ಯಾತಿ ಪಡೆದಿದೆ. ಡೇರಿಗೆ ಉದ್ಯಮಿ ವಿಜಯ ಸಂಕೇಶ್ವರ ಅವರೇ ಚೇರ್ಮನ್ ಆಗಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ಇವರ ಉದ್ಯಮ ಹೊರ ರಾಜ್ಯಕ್ಕೂ ವಿಸ್ತರಣೆಯಾಗಿತ್ತು. ಆದಿತ್ಯ ಮಿಲ್ಕ್ ಜೊತೆಗೆ ಐಸ್ ಕ್ರೀಮ್, ಮೊಸರು ಹೀಗೆ ಹಾಲಿನ ಉತ್ಪನ್ನಗಳು ಜನರ ಬೇಡಿಕೆ ಗಿಟ್ಟಿಸಿದ್ದವು.

ಹೀಗಿರುವಾಗಲೇ ಡೇರಿ ಉದ್ಯಮವನ್ನು ನೋಡಿಕೊಂಡಿದ್ದ ವಿಜಯ ಸಂಕೇಶ್ವರ ಅವರ ಅಳಿಯ ಶಿವಕಾಂತ ಸಿದ್ನಾಳ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗಿದ್ದರು. ಉದ್ಯಮಿಯಾಗಿ ಯಶಸ್ಸು ಸಾಧಿಸಿದ್ದ ಶಿವಕಾಂತ ಸಿದ್ನಾಳ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಸಿದ್ನಾಳ ಸಾವಿಗೆ ವಾಮಾಚಾರ ಕಾರಣವೆಂಬ ಆರೋಪ ಕೇಳಿಬಂದಿದ್ದು, ಶಿವಕಾಂತ ಸಿದ್ನಾಳರ ಪತ್ನಿಯೇ ಈ ಆರೋಪ ಮಾಡಿದ್ದಾರೆ. ಇದರೊಂದಿಗೆ ಬೆಳಗಾವಿ ಮಾಜಿ ಸಂಸದರ ಕುಟುಂಬ ಕಲಹ ಬೀದಿಗೆ ಬಂದಿದ್ದು, ಸಂಕೇಶ್ವರ ಮತ್ತು ಅಳಿಯನ ಆಸ್ತಿಯನ್ನು ಕಬಳಿಸಲು ಸ್ವಂತ ಕುಟುಂಬಸ್ಥರೇ ಹೊಂಚು ಹಾಕಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.

The death of dairy entrepreneur Shivkant Sidnal, son of former MP S B Sidnal, has taken a curious turn with with his wife alleging black magic by other family members with an eye on the business. Shivkant’s wife Deepa is the daughter of businessman and former MP Vijay Sankeshwar. Shivkant Sidnal was running Vijaykant Dairy and Food Products Ltd, the makers of Adityaa milk and other milk products. The company had been giving tough competition to the Nandini brand of milk and milk products of the state-run Karnataka Milk Federation.