Mangalore rain, Dinesh Gundu Rao, Lakshmi Hebbalkar: ‘ಉಸ್ತುವಾರಿ’ ಕರ್ತವ್ಯ ಮರೆತ ಸಚಿವರು ; ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಅವಾಂತರಗಳಾದರೂ ಸಚಿವರ ನಿರ್ಲಕ್ಷ್ಯ, ಸರಕಾರದ ಮಟ್ಟದಲ್ಲೇ ಟೀಕೆ

28-07-24 12:57 pm       Bangalore Correspondent   ಕರ್ನಾಟಕ

ಕಳೆದ ಹದಿನೈದು ದಿನಗಳಿಂದ ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹದ್ದೇ ಸುದ್ದಿ. ಎಲ್ಲೆಲ್ಲೂ ಮಳೆಹಾನಿ, ಮನೆ ಕುಸಿತದಿಂದ ಸಾವು-ನೋವು, ಜನರ ಗೋಳಿನದ್ದೇ ಚಿಂತೆ.

ಬೆಂಗಳೂರು, ಜುಲೈ.28: ಕಳೆದ ಹದಿನೈದು ದಿನಗಳಿಂದ ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹದ್ದೇ ಸುದ್ದಿ. ಎಲ್ಲೆಲ್ಲೂ ಮಳೆಹಾನಿ, ಮನೆ ಕುಸಿತದಿಂದ ಸಾವು-ನೋವು, ಜನರ ಗೋಳಿನದ್ದೇ ಚಿಂತೆ. ಸಂತ್ರಸ್ತರು ಕುಸಿದ ಮನೆಗಳನ್ನು ಕಟ್ಟುವುದರ ಬಗ್ಗೆ, ಜೀವ ಕಳಕೊಂಡವರ ಬಗ್ಗೆ ನೆನೆದು ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಆದರೆ ಇಷ್ಟೆಲ್ಲ ಅವಾಂತರ ಆಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ತಮ್ಮ ಜಿಲ್ಲೆಗಳತ್ತ ಮುಖ ಮಾಡಿಲ್ಲ.

ಬೆಂಗಳೂರು ಭಾಗದ ಸಚಿವರು ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳನ್ನು ಬಿಟ್ಟು ದೂರವೇ ಉಳಿದಿದ್ದಾರೆ. ಎಂಟಕ್ಕೂ ಹೆಚ್ಚು ಉಸ್ತುವಾರಿ ಸಚಿವರು ಹಾನಿಪೀಡಿತ ಪ್ರದೇಶಕ್ಕೆ ತೆರಳದೆ ದೂರ ನಿಂತಿರುವುದು ಸರಕಾರದ ಮಟ್ಟದಲ್ಲಿ ಶಾಸಕರ ಟೀಕೆಗೂ ಗುರಿಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಿಂದ ನೀರನ್ನು ಭಾರೀ ಪ್ರಮಾಣದಲ್ಲಿ ಹೊರಗೆ ಬಿಡಲಾಗುತ್ತಿದೆ. ಹೀಗಾಗಿ ಸ್ಥಳೀಯ ಆಡಳಿತ ಜೊತೆಗೆ ಕಾರ್ಯ ನಿರ್ವಹಿಸುವಲ್ಲಿ ಆಯಾ ಜಿಲ್ಲಾಡಳಿತದ ಜೊತೆಗೆ ಉಸ್ತುವಾರಿ ಸಚಿವರು ನೆರವಿಗೆ ನಿಲ್ಲಬೇಕಾಗುತ್ತದೆ. ಆದರೆ ತಮ್ಮ ಹೊಣೆಯನ್ನು ನಿರ್ವಹಿಸಲು ಉಸ್ತುವಾರಿ ಸಚಿವರು ಉತ್ಸಾಹ ತೋರದೇ ರಾಜಧಾನಿಯಲ್ಲೇ ಉಳಿದು ಬಿಟ್ಟಿದ್ದಾರೆ.

Siddaramaiah news: BJP withdraws protest, slams full-page ads by Karnataka  CM

ಉಸ್ತುವಾರಿ ಸಚಿವರ ನಿರ್ಲಕ್ಷ್ಯದ ಬಗ್ಗೆ ಸೂಕ್ಷ್ಮವಾಗಿ ಗಮನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವೆಡೆ ಮಳೆ, ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳಿಗೆ ಭೇಟಿ, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಗಮನಹರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಸಿಎಂ ಚುರುಕು ಮುಟ್ಟಿಸುತ್ತಿದ್ದಂತೆ ಅಲರ್ಟ್ ಆಗಿರುವ ಕೆಲವು ಸಚಿವರು ತಮ್ಮ ಜಿಲ್ಲಾ ವ್ಯಾಪ್ತಿಯ ಹಾನಿಪೀಡಿತ ಪ್ರದೇಶಗಳಿಗೆ ಪ್ರವಾಸ ತೆರಳಲು ವೇಳಾಪಟ್ಟಿ ಮಾಡಿಕೊಂಡಿದ್ದಾರೆ.

ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಿದರೆ ತಮ್ಮ ಕ್ಷೇತ್ರ, ಜಿಲ್ಲೆಗೆ ಸೀಮಿತವಾಗುತ್ತಾರೆ ಎಂಬ ಕಾರಣಕ್ಕೆ ಬಹುತೇಕರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಿರಲಿಲ್ಲ. ಆದರೆ ಸಿದ್ದರಾಮಯ್ಯ ಸರಕಾರದಲ್ಲಿ ಬಹುತೇಕರಿಗೆ ತವರು ಜಿಲ್ಲೆಯಲ್ಲೇ ಉಸ್ತುವಾರಿ ನೀಡಲಾಗಿದೆ. ಉಳಿದಂತೆ, ಸಚಿವ ಸ್ಥಾನ ಇಲ್ಲದ ಜಿಲ್ಲೆಗಳಿಗೆ ಬೆಂಗಳೂರಿನ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಇಷ್ಟಾದರೂ ಸಚಿವರು ತವರು ಜಿಲ್ಲೆಯಲ್ಲೂ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಸರಕಾರದ ಮಟ್ಟದಲ್ಲೇ ಆಕ್ಷೇಪಕ್ಕೆ ಕಾರಣವಾಗಿದೆ. ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಸ್ಥಾನದ ಮೂಲಕ ಸಿಗುವ ಅಧಿಕಾರಕ್ಕಾಗಿ ಹಾತೊರೆಯುವವರು ಉಸ್ತುವಾರಿ ಜಿಲ್ಲೆಯ ಜವಾಬ್ದಾರಿ ನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ.

Will upgrade government residential schools on par with private ones:  Karnataka Minister HC Mahadevappa - The South First

Kelachandra Joseph George: The rags-to-riches story of KJ George, the  closest aide of Karnataka CM - The Economic Times

ಡಾ.ಎಚ್.ಸಿ. ಮಹದೇವಪ್ಪ -ಮೈಸೂರು, ಡಾ.ಶರಣಪ್ರಕಾಶ ಪಾಟೀಲ್ -ರಾಯಚೂರು, ಕೆ.ಜೆ. ಜಾರ್ಜ್ - ಚಿಕ್ಕಮಗಳೂರು, ಶಿವರಾಜ ತಂಗಡಗಿ -ಕೊಪ್ಪಳ, ಚೆಲುವರಾಯಸ್ವಾಮಿ –ಮಂಡ್ಯ, ಆರ್.ಬಿ. ತಿಮ್ಮಾಪುರ್- ಬಾಗಲಕೋಟೆ, ಸತೀಶ್ ಜಾರಕಿಹೊಳಿ- ಬೆಳಗಾವಿ, ಸಂತೋಷ್ ಲಾಡ್ –ಧಾರವಾಡ, ಎಚ್.ಕೆ. ಪಾಟೀಲ್- ಗದಗ ತಮ್ಮದೇ ಜಿಲ್ಲೆಗಳಲ್ಲಿ ಉಸ್ತುವಾರಿ ಹೊಂದಿದ್ದರೆ, ಬೋಸರಾಜು ಕೊಡಗು, ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ, ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ, ಜಮೀರ್ ಅಹ್ಮದ್ –ಬಳ್ಳಾರಿ, ವಿಜಯನಗರ ಜಿಲ್ಲೆಯ ಉಸ್ತುವಾರಿ ಹೊಂದಿದ್ದಾರೆ. ಅಂಕೋಲಾದ ಗುಡ್ಡ ಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದರು. ಉಳಿದಂತೆ, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕರ್ತವ್ಯವನ್ನು ಮರೆತೇ ಬಿಟ್ಟಿದ್ದಾರೆ.

Minister in charge of Dakshina Kannada Dinesh Gundu Rao not Udupi Lakshmi Hebbalkar visit areas or house effected by rain.  CM Siddaramaiah was also disappointed ove the nature of in charge ministers.