Wayanad Landslide, yatnal: ಗಣಿಗಾರಿಕೆ ತಡೆಯದೆ, ಒಂದು ಕೋಮಿನವರನ್ನು ಸ್ಥಳಾಂತರ ಮಾಡದೇ ಇದ್ದುದು ದುರಂತಕ್ಕೆ ಕಾರಣವಾಯ್ತು.. ಪ್ರೊ.ಗಾಡ್ಗೀಳ್ ಭೂಕುಸಿತದ ಬಗ್ಗೆ ಅಂದೇ ಎಚ್ಚರಿಸಿದ್ದರು ; ವಯನಾಡ್ ದುರಂತ ಬಗ್ಗೆ ಶಾಸಕ ಯತ್ನಾಳ್ 

02-08-24 11:11 pm       Bangalore Correspondent   ಕರ್ನಾಟಕ

ಗಾಡ್ಗೀಳ್ ವರದಿ ನಿರ್ಲಕ್ಷಿಸಿ ಪಶ್ಚಿಮ ಘಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ಮತ್ತು ಕೇರಳ ಸರ್ಕಾರ ಒಂದು ಕೋಮಿನ ತುಷ್ಟೀಕರಣಕ್ಕಾಗಿ ಅಲ್ಲಿನ ಜನರನ್ನು ಸ್ಥಳಾಂತರ ಮಾಡದೇ ಇದ್ದುದು ವಯನಾಡಿನ ದುರಂತಕ್ಕೆ ಕಾರಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು, ಆಗಸ್ಟ್ 2 : ಗಾಡ್ಗೀಳ್ ವರದಿ ನಿರ್ಲಕ್ಷಿಸಿ ಪಶ್ಚಿಮ ಘಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ಮತ್ತು ಕೇರಳ ಸರ್ಕಾರ ಒಂದು ಕೋಮಿನ ತುಷ್ಟೀಕರಣಕ್ಕಾಗಿ ಅಲ್ಲಿನ ಜನರನ್ನು ಸ್ಥಳಾಂತರ ಮಾಡದೇ ಇದ್ದುದು ವಯನಾಡಿನ ದುರಂತಕ್ಕೆ ಕಾರಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. 

ವಯನಾಡು ಭೂಕುಸಿತ ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇರಳ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಕೇರಳದಲ್ಲಿರುವ ವಿಜ್ಞಾನ ಹಾಗೂ ತಾಂತ್ರಿಕ ಸಂಸ್ಥೆಗಳು ವಯನಾಡಿನ ಮೇಪ್ಪಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಕ್ಷೇತ್ರ ಪರಿಶೀಲನೆ ಮಾಡಬಾರದು, ಮತ್ತು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಹಂಚಿಕೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಒಂದು ವೇಳೆ ಮಾಡಲಿಚ್ಛಿಸುವವರು ರಾಜ್ಯ ಪರಿಹಾರ ಆಯುಕ್ತರಿಂದ ಲಿಖಿತ ಅನುಮೋದನೆ ಪಡೆದು ಮುಂದುವರೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಇವರು ಯಾವುದೇ ಕಾಳಜಿಯಿಂದ ಹೊರಡಿಸಿದ್ದಲ್ಲ. ವಿಜ್ಞಾನಿಗಳು, ಸಂಶೋಧಕರು ಸತ್ಯ ವರದಿ ನೀಡಿದರೆ ಕೇರಳ ಸರ್ಕಾರ ಹಾಗೂ ಕಾಂಗ್ರೆಸಿನ ತಪ್ಪುಗಳು ಗೊತ್ತಾಗಲಿವೆ. ಈ ಹಿಂದೆ ಕೇರಳದಲ್ಲಿ ಆಗಿರುವ ಗುಡ್ಡ ಕುಸಿತ, ಭೂಕುಸಿತದ ಬಗ್ಗೆ ಖ್ಯಾತ ಪರಿಸರ ಶಾಸ್ತ್ರಜ್ಞ ಪ್ರೊ.ಮಾಧವ್ ಗಾಡ್ಗೀಳ್ ಅವರು ತಮ್ಮ ನೇತೃತ್ವದ ಪಶ್ಚಿಮ ಘಟ್ಟಗಳ ತಜ್ಞ ಸಮಿತಿ ವರದಿ [The Western Ghats Ecology Experts Panel report] ನಲ್ಲಿ ಉಲ್ಲೇಖಿಸಿದ್ದರು.

ವಯನಾಡಿನ ಮೆಪ್ಪಾಡಿಯಲ್ಲಿ ಆಗುತ್ತಿರುವ ಕಲ್ಲು ಗಣಿಗಾರಿಕೆ ಸೇರಿದಂತೆ ಅನೇಕ ಪರಿಸರ ಹಾನಿಕರ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಮ್ಮ ವರದಿಯಲ್ಲಿ ಸೂಚಿಸಿದ್ದರು. ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಹೇಳಿದ್ದರು. ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯ ಆಗಿರುವುದರಿಂದ ಇಲ್ಲಿ ಗಣಿಗಾರಿಕೆ ನಡೆಸಬಾರದು ಎಂದಿದ್ದರು. 

ಆದರೆ, ಅಂದಿನ ಯು.ಪಿ.ಎ ಸರ್ಕಾರ ಪ್ರೊ.ಗಾಡ್ಗೀಳ್ ಅವರ ವರದಿಯನ್ನು ಕಸದ ಬುಟ್ಟಿಗೆ ಹಾಕಿತು. ಪ್ರೊ.ಗಾಡ್ಗೀಳ್ ಹಾಗೂ ಅವರ ತಂಡ ನೀಡಿದ್ದ ವರದಿಯನ್ನು ಕರಾರುವಕ್ಕಾಗಿ ರಾಜಕೀಯ ಹಸ್ತಕ್ಷೇಪವಿಲ್ಲದೆ ಅನುಷ್ಠಾನಗೊಳಿಸಿದ್ದರೆ ಇಂದು ಆಗಿರುವ ಸಾವು, ನೋವುಗಳನ್ನು ತಡೆಯಬಹುದಿತ್ತು. ಇಷ್ಟು ಸಾಲದಂತೆ ಕೇರಳದ ಅಂದಿನ ಅರಣ್ಯ ಸಚಿವರು ಭೂ ಕುಸಿತ ವಲಯದಲ್ಲಿರುವ ಸುಮಾರು 4000 ಕುಟುಂಬಗಳನ್ನು ಸ್ಥಳಾಂತರ ಮಾಡಲು ಬರುವುದಿಲ್ಲ. ಯಾಕೆಂದೆರೆ ನಮಗೆ ಒಂದು ಕೋಮಿನ ಸಂಘಗಳಿಂದ ಒತ್ತಡ ಇದೆ ಎಂದು ಹೇಳಿದ್ದರು.

ಇದಲ್ಲದೆ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಾಲ್ಕು ವರ್ಷಗಳ ಹಿಂದೆಯೇ 4000 ಕುಟುಂಬಗಳನ್ನು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಸಲಹೆ ನೀಡಿತ್ತು. ಪ್ರಾಧಿಕಾರದ ಸಲಹೆಯನ್ನು ಸ್ವೀಕರಿಸುವ ಬದಲಿಗೆ ಸತ್ಯವನ್ನು ನುಡಿದ ಅರಣ್ಯ ಸಚಿವರಿಗೆ ಚುನಾವಣೆಯಲ್ಲಿ ಸರ್ಕಾರ ಟಿಕೆಟ್ ನೀಡಲಿಲ್ಲ. ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡುವುದು ಬಿಟ್ಟು ಒಂದು ಕೋಮಿನ ಓಲೈಕೆಗೆ, ತುಷ್ಟೀಕರಣ ಮಾಡಿದ ಕೇರಳ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಯತ್ನಾಳ್ ಹೇಳಿದ್ದಾರೆ.

Wayanad Landslide, yatnal slams officlas for neglecting report.