Bangalore Police, Catch thief love: ನಟೋರಿಯಸ್ ಕಳ್ಳನನ್ನು 45 ದಿನ ಕಾದು ನಡುರಸ್ತೆಯಲ್ಲಿ ಸಿನಿಮಾ ಸ್ಟೈಲಲ್ಲಿ ಲಾಕ್ ಮಾಡಿದ ಒಬ್ಬಂಟಿ ಪೇದೆ ;  ಸ್ಕೂಟರಲ್ಲಿ ಎಳ್ಕೊಂಡು ಹೋದ್ರೂ ಕಾಲಿನಲ್ಲೇ ಇಂಟರ್ಲಾಕ್ ! ಮಾಜಿ ಯೋಧನ ಸಾಹಸದ ವಿಡಿಯೋ ವೈರಲ್ 

10-08-24 12:10 pm       Bangalore Correspondent   ಕರ್ನಾಟಕ

ಬರೋಬ್ಬರಿ 50ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದರೂ ತಲೆಮರೆಸಿಕೊಂಡಿದ್ದ ಬೆಂಗಳೂರಿನ ನಟೋರಿಯಸ್ ಕಳ್ಳನನ್ನು ಪೊಲೀಸ್ ಪೇದೆಯೊಬ್ಬರು ಬೆಂಗಳೂರಿನ ಬಿಝಿ ಟ್ರಾಫಿಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ಸಾಹಸ ಮೆರೆದು ಲಾಕ್ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದೆ. 

ಬೆಂಗಳೂರು, ಆಗಸ್ಟ್.10: ಬರೋಬ್ಬರಿ 50ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದರೂ ತಲೆಮರೆಸಿಕೊಂಡಿದ್ದ ಬೆಂಗಳೂರಿನ ನಟೋರಿಯಸ್ ಕಳ್ಳನನ್ನು ಪೊಲೀಸ್ ಪೇದೆಯೊಬ್ಬರು ಬೆಂಗಳೂರಿನ ಬಿಝಿ ಟ್ರಾಫಿಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ಸಾಹಸ ಮೆರೆದು ಲಾಕ್ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದೆ. 

ಬೆಂಗಳೂರಿನ ಸದಾಶಿವ ನಗರದಲ್ಲಿ ಆಗಸ್ಟ್ 6ರಂದು ಘಟನೆ ನಡೆದಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆಯ 50 ವರ್ಷದ ಪೇದೆ, ಮಾಜಿ ಯೋಧ ದೊಡ್ಡ ಲಿಂಗಯ್ಯ (50) ಈ ಸಾಹಸ ಮೆರೆದಿದ್ದಾರೆ. 50ಕ್ಕೂ ಹೆಚ್ಚು ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜನನ್ನು ಅರೆಸ್ಟ್ ಮಾಡುವುದಕ್ಕಾಗಿ ಕೊರಟಗೆರೆ ಠಾಣೆಯ ಅಪರಾಧ ವಿಭಾಗದ ಪೇದೆಗಳಾಗಿದ್ದ ದೊಡ್ಡ ಲಿಂಗಯ್ಯ ಮತ್ತು ಮೋಹನ್, ಸದಾಶಿವನಗರ ಆಸುಪಾಸಿನಲ್ಲಿ 45 ದಿನಗಳಿಂದ ಹೊಂಚು ಹಾಕಿದ್ದರು.‌ 

ಆಗಸ್ಟ್ 6ರಂದು ಸ್ಕೂಟರ್ ನಲ್ಲಿ ಸಾಗುತ್ತಿದ್ದ ಕಳ್ಳನ ಕಾಣುತ್ತಲೇ ದೊಡ್ಡ ಲಿಂಗಯ್ಯ ತನ್ನ ಪ್ರಾಣ ಲೆಕ್ಕಿಸದೆ ಬೆನ್ನಟ್ಟಿ ಲಾಕ್ ಮಾಡಿದ್ದು ಇದರ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಹೇಸರಘಟ್ಟ ನಿವಾಸಿಯಾಗಿರುವ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ ಸದಾಶಿವನಗರದ ಬಿಝಿ ಟ್ರಾಫಿಕ್ ನಲ್ಲಿ ಸಾಗುತ್ತಿದ್ದ. ಸಿಗ್ನಲ್ ಓಪನ್ ಆಗಿ ಮುಂದೆ ಸಾಗುತ್ತಿದ್ದಂತೆ ಅಲ್ಲಿಯೇ ಸಿವಿಲ್ ಡ್ರೆಸ್ ನಲ್ಲಿ ನಡೆದು ಬರುತ್ತಿದ್ದ ಪೊಲೀಸ್ ಪೇದೆ ದೊಡ್ಡ ಲಿಂಗಯ್ಯ ಗಮನಿಸಿದ್ದು ಬೆನ್ನಟ್ಟಿ ರೌಡಿಯ ಪ್ಯಾಂಟಿನಲ್ಲಿ ಹಿಡಿದುಕೊಂಡಿದ್ದಾರೆ. ಈ ವೇಳೆ, ರೌಡಿ ಸ್ಕೂಟರ್ ನಿಲ್ಲಿಸದೆ ಮುಂದೆ ಸಾಗಿದ್ದು ಪೇದೆಯನ್ನು 20 ಮೀಟರ್ ಎಳೆದುಕೊಂಡೇ ಸಾಗಿದ್ದಾನೆ. ಆದರೆ ಪೇದೆ ಹಿಡಿತ ಸಡಿಲಗೊಳಿಸದೆ ತನ್ನ ಕಾಲಿನಲ್ಲೇ ಆತನ ಕಾಲನ್ನು ಲಾಕ್ ಮಾಡಿದ್ದಾರೆ. ಸ್ಕೂಟರ್ ಒಂದು ಸುತ್ತು ಹೊಡೆದರೂ ಪೇದೆಯ ಹಿಡಿತ ಸಡಿಲವಾಗದೆ ನಿಂತು ಬಿಟ್ಟಾಗ ಜನ ಸೇರಿದ್ದಾರೆ. ‌ಅಲ್ಲೇ ಇದ್ದ ಇಬ್ಬರು ಟ್ರಾಫಿಕ್ ಪೊಲೀಸರು ಮತ್ತು ಇನ್ನೊಬ್ಬ ಪೊಲೀಸ್ ಪೇದೆ ಮೋಹನ್ ಬಂದು ಹಿಡಿದುಕೊಂಡಿದ್ದಾರೆ.   

ಆದರೆ ಧಡೂತಿ ದೇಹದ ಹೊಟ್ಟೆ ಮಂಜ ಪೊಲೀಸರನ್ನು ದೂಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಇತರೇ ಸಾರ್ವಜನಿಕರು ಸೇರಿದ್ದು ಆರೋಪಿಗೆ ಕಾಲಿನಲ್ಲಿ ಒದ್ದು ಕೈಯಲ್ಲಿ ಗುದ್ದಿ ಲಾಕ್ ಮಾಡಿದ್ದಾರೆ. ಬಳಿಕ ಪೊಲೀಸರು ರೌಡಿಯನ್ನು ಬಂಧಿಸಿದ್ದಾರೆ. ಜೀನ್ಸ್ ಪ್ಯಾಂಟ್ ಹಾಕ್ಕೊಂಡಿದ್ದರಿಂದ ದೊಡ್ಡ ಲಿಂಗಯ್ಯ ಅವರು ಯಾವುದೇ ಗಾಯವಾಗದೆ ಪಾರಾಗಿದ್ದಾರೆ. 

ಹೊಟ್ಟೆ ಮಂಜ ತುಮಕೂರು, ಬೆಂಗಳೂರಿನಲ್ಲಿ ಮನೆ ಕಳ್ಳತನಕ್ಕೆ ಕುಖ್ಯಾತಿ ಹೊಂದಿದ್ದು 50ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ. ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದುದರಿಂದ ಆತನನ್ನು ಹಿಡಿಯೋದು ಸವಾಲಾಗಿತ್ತು. ಹೀಗಾಗಿ ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆ ಠಾಣೆಯ ಪಿಎಸ್ಐ ಚೇತನ್, ಎಷ್ಟು ದಿನವಾದರೂ ಕಳ್ಳನ ಹಿಡಿದು ತರಲೇಬೇಕೆಂದು ಇಬ್ಬರು ಪೇದೆಗಳಿಗೆ ಟಾಸ್ಕ್ ಕೊಟ್ಟಿದ್ದರು. ಹೀಗಾಗಿ 45 ದಿನಗಳಿಂದ ಸದಾಶಿವನಗರದಲ್ಲಿ ಕಾಯುತ್ತಿದ್ದರು. ದೊಡ್ಡ ಲಿಂಗಯ್ಯ ಅವರು ಮಾಜಿ ಯೋಧನಾಗಿದ್ದು ಸೇನೆಯಿಂದ ನಿವೃತ್ತಿ ಪಡೆದು ಪೊಲೀಸ್ ಪೇದೆಯಾಗಿ ಕರ್ತವ್ಯ ಆರಂಭಿಸಿದ್ದರು. ಹೊಟ್ಟೆ ಮಂಜ ರೌಡಿಯಲ್ಲ‌. ಕಳ್ಳತನವೇ ಫುಲ್ ಟೈಮ್ ಕಸುಬು ಮಾಡಿಕೊಂಡಿದ್ದ. ದೊಡ್ಡ ಲಿಂಗಯ್ಯ ಸೇನೆಯಲ್ಲಿ ಇದ್ದ ಅನುಭವದಿಂದಾಗಿ ಅಷ್ಟು ಧೈರ್ಯದಿಂದ ನಡುರಸ್ತೆಯಲ್ಲಿ ಕಳ್ಳನನ್ನು ಲಾಕ್ ಮಾಡಿದ್ದಾರೆ ಎಂದು ಕೊರಟಗೆರೆ ಪಿಎಸ್ಐ ಚೇತನ್ ಪ್ರತಿಕ್ರಿಯಿಸಿದ್ದಾರೆ.

Bangalore police constable Daring Act To Catch Thief wanted in more than 50 cases  On Motorcycle. Constable Dodda Lingayya, dressed in civil clothes, approached a two-wheeler on a busy road and jumped before it, showed a video. Manjesh, who has 75 police cases pending against him, stopped the bike. Seconds later, he went full throttle and dragged the cop for around 20 metres as he held on to his collar.