Vijayendra, Yatnal, Naleen Kateel: ವಿಜಯೇಂದ್ರ ವಿರುದ್ಧ ಸಿಡಿದೆದ್ದ ಭಿನ್ನರು, ಮೈಸೂರು ಚಲೋ ಬೆನ್ನಲ್ಲೇ ಯತ್ನಾಳ್- ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರ ಸಭೆ, ಬಳ್ಳಾರಿಗೆ ಪ್ರತ್ಯೇಕ ಪಾದಯಾತ್ರೆಗೆ ನಿರ್ಧಾರ, ಅನಾರೋಗ್ಯ ನೆಪದಲ್ಲಿ ನಳಿನ್ ಕಟೀಲ್ ಸಭೆಗೆ ಗೈರು! 

12-08-24 12:29 pm       Bangalore Correspondent   ಕರ್ನಾಟಕ

ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿಯ ಅತೃಪ್ತ ಬಣದ ನಾಯಕರು ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಮುಂದಿಟ್ಟು ಪ್ರತ್ಯೇಕ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ಬೆಂಗಳೂರು, ಆಗಸ್ಟ್ 12: ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿಯ ಅತೃಪ್ತ ಬಣದ ನಾಯಕರು ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಮುಂದಿಟ್ಟು ಪ್ರತ್ಯೇಕ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಆಮೂಲಕ ಅತೃಪ್ತ ಬಿಜೆಪಿ ನಾಯಕರು ರಾಜ್ಯ ಬಿಜೆಪಿಗೆ ಸಡ್ಡು ಹೊಡೆದು ಉತ್ತರ ಕರ್ನಾಟಕದಲ್ಲಿ ತಮ್ಮ ಬಣದ ವರ್ಚಸ್ಸು ವೃದ್ಧಿಸಿಕೊಳ್ಳುವ ಹೆಜ್ಜೆ ಇಟ್ಟಿದ್ದಾರೆ.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮುಖಂಡರು ಬೆಳಗಾವಿಯ ರೆಸಾರ್ಟ್ ಒಂದರಲ್ಲಿ ಭಾನುವಾರ ಸಭೆ ನಡೆಸಿದ್ದು ಉತ್ತರ ಕರ್ನಾಟಕದಲ್ಲಿ ತಮ್ಮ ಬಣವನ್ನು ಗಟ್ಟಿಗೊಳಿಸುವುದಕ್ಕಾಗಿ ವಾಲ್ಮೀಕಿ ನಿಗಮದ ಹಗರಣ ಮುಂದಿಟ್ಟು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಸಮುದಾಯದ ಬೆನ್ನಿಗೆ ನಿಲ್ಲುವುದು ಮತ್ತು ವಿಜಯೇಂದ್ರ – ಯಡಿಯೂರಪ್ಪ ಪ್ರಾಬಲ್ಯವನ್ನು ತಡೆಯುವ ಉದ್ದೇಶದಿಂದ ತಮ್ಮದೇ ಸಭೆ ನಡೆಸಿದ್ದಾರೆ. ಮುಡಾ ಹಗರಣ ಮುಂದಿಟ್ಟು ವಿಜಯೇಂದ್ರ ನೇತೃತ್ವದಲ್ಲಿ ನಡೆಸಿದ ಪಾದಯಾತ್ರೆ ಕೊನೆಯಾಗುತ್ತಿದ್ದಂತೆ ಯಡಿಯೂರಪ್ಪ ವಿರೋಧಿಯಾಗಿ ಗುರುತಿಸಿಕೊಂಡಿರುವ ನಾಯಕರು ಸಭೆ ನಡೆಸುವ ಮೂಲಕ ವಿಜಯೇಂದ್ರ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದಾರೆ.

ಮೈಸೂರು ಪಾದಯಾತ್ರೆ ಕುರಿತಾಗಿ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಟೀಕಿಸಿರುವ ಬಸನಗೌಡ ಯತ್ನಾಳ್, ಯಾರೋ ಒಬ್ಬರನ್ನು ಹೀರೋ ಮಾಡುವುದಕ್ಕಾಗಿ ಯಾತ್ರೆ ನಡೆಸುವುದಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ಬಿವೈ ವಿಜಯೇಂದ್ರ ನಾಯಕತ್ವ ಒಪ್ಪದ ಈ ನಾಯಕರು ಪಕ್ಷದ ಹೈಕಮಾಂಡಿಗೆ ತಮ್ಮ ಭಿನ್ನ ದನಿಯನ್ನು ಮುಟ್ಟಿಸುವುದಕ್ಕಾಗಿ ಸಭೆ ನಡೆಸಿದ್ದು, ಇದರ ಬಗ್ಗೆ ದೂರು ಒಯ್ಯುವುದಕ್ಕೂ ನಿರ್ಧರಿಸಿದ್ದಾರೆ. ಸಭೆಯಲ್ಲಿ ಬಿಪಿ ಹರೀಶ್, ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಜಿಎಂ ಸಿದ್ದೇಶ್ವರ, ಅಣ್ಣಾ ಸಾಹೇಬ ಜೊಲ್ಲೆ, ಅರವಿಂದ ಲಿಂಬಾವಳಿ, ಎನ್.ಆರ್ ಸಂತೋಷ್ ಸೇರಿ ಹಲವರು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಅವರೂ ಪಾಲ್ಗೊಳ್ಳಬೇಕಿತ್ತು. ಅನಾರೋಗ್ಯ ಕಾರಣದಿಂದ ಭಾಗವಹಿಸಿಲ್ಲ ಎಂದು ಸಭೆಯಲ್ಲಿದ್ದ ನಾಯಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಗಣೇಶ ಚತುರ್ಥಿ ಬಳಿಕ ಸೆ.17ರಿಂದ ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಾಗಲಕೋಟ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಲು ಭಿನ್ನ ನಾಯಕರು ನಿರ್ಧರಿಸಿದ್ದು, ಇದಕ್ಕಾಗಿ ಯಡಿಯೂರಪ್ಪ ವಿರೋಧಿ ನಾಯಕರನ್ನು ಒಟ್ಟು ಸೇರಿಸಲಾಗುತ್ತಿದೆ. ಆಮೂಲಕ ವಿಜಯೇಂದ್ರ ನಾಯಕತ್ವಕ್ಕೆ ಪರ್ಯಾಯ ನಾಯಕರ ಬಣವನ್ನು ಗಟ್ಟಿಗೊಳಿಸಲು ಅತೃಪ್ತರು ನಿರ್ಧರಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿರುವ ಪ್ರಮುಖರು ಬಿ.ಎಲ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡವರೇ ಆಗಿದ್ದು, ನಳಿನ್ ಕುಮಾರ್ ಕಟೀಲ್ ಮಾತ್ರ ಅನಾರೋಗ್ಯ ನೆಪದಲ್ಲಿ ಸಭೆಯಿಂದ ದೂರವುಳಿದಿದ್ದಾರೆ ಎನ್ನಲಾಗುತ್ತಿದೆ.

A meeting of some BJP leaders at a private resort in Belagavi on Sunday (August 11, 2024), led to widespread speculation that those opposed to the leadership of B.Y. Vijayendra, party state unit president, were discussing plans to unseat him.