Charmadi Ghat, Rain: ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಪ್ರವಾಹದ ರೀತಿ ಹರಿದ ಮಳೆ ನೀರು ; ಕುಸಿದ ಗುಡ್ಡ, ಬಂಡೆ ಕಲ್ಲು 

22-08-24 01:37 pm       HK News Desk   ಕರ್ನಾಟಕ

ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ಇಂದು ಮತ್ತೆ ಗುಡ್ಡ ಕುಸಿದಿದೆ.

ಚಿಕ್ಕಮಗಳೂರು, ಆ 22: ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ಇಂದು ಮತ್ತೆ ಗುಡ್ಡ ಕುಸಿದಿದೆ.

ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದಿದೆ. ಮಳೆ ನೀರಿನ ಜೊತೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ. ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಹನ‌ ಸಂಚಾರ ಎಂದಿನಂತೆ ಇದ್ದು ಯಾವುದೇ ತೊಂದರೆ ಇಲ್ಲ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು ರಸ್ತೆಯಲ್ಲಿ ಅಡಿಗಟ್ಟಲೇ ನೀರು ಹರಿಯುತ್ತಿದೆ

ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯನ್ನು ಚಾರ್ಮಾಡಿ ಘಾಟ್ ಸಂಪರ್ಕಿಸುತ್ತದೆ. ಬೆಂಗಳೂರಿನಿಂದ ದಕ್ಷಿಣ ಕನ್ನಡ, ಉಡುಪಿ ಭಾಗಗಳಿಗೆ ತೆರಳುವ ಮಂದಿ ಶಿರಾಡಿ ಮೂಲಕ ತೆರಳುತ್ತಿದ್ದರು. ಆದರೆ ಶಿರಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ.

ಇನ್ನು ಘಾಟ್ ರಸ್ತೆಯಲ್ಲಿ 2 ಅಡಿ ಎತ್ತರಕ್ಕೆ ನೀರು ಹರಿಯುತ್ತಿದೆ . ಮೂಡಿಗೆರೆ ತಾಲೂಕಿನ ಬಾಳೂರು, ಕಳಸ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಗುಡ್ಡದ ಕೆಸರುಮಿಶ್ರಿತ ನೀರಿನಿಂದ ರಸ್ತೆಯೇ ಕಾಣದಂತಾಗಿದೆ. ನೀರಿನ ರಭಸದ ಮಧ್ಯೆ ಸಂಚರಿಸಲಾಗದೆ ಕೆಲ ವಾಹನಗಳು ಕೊಟ್ಟಿಗೆಹಾರದಲ್ಲೇ ನಿಂತಿವೆ.

ಬಿಟ್ಟೂ ಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈ ಭಾಗದ ಜನರು ಮನೆಯಿಂದ ಹೊರಬರಲು ಸಾಧ್ಯವಾಗದೇ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರದಲ್ಲೂ ಕೂಡ ಅಡಚಣೆ ಉಂಟಾಗುತ್ತಿದೆ.

ಇನ್ನು ರಾಜ್ಯದಲ್ಲಿ ಮಳೆ ಮತ್ತೆ ವೇಗ ಪಡೆದಿದೆ. ಮುಂದಿನ 24 ಗಂಟೆಗಳಿಗೆ ಅನ್ವಯಿಸುವಂತೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಕೋಲಾರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

Heavy rains, landslide again at charmadi ghat , residents in danger. Water has been flowing in the deep bends at almost 2 feet high. Videos of this have gone viral on social media.