Zameer Ahmed, Kumaraswamy: ನೂರು ಸಿದ್ದರಾಮಯ್ಯ ಯಾಕೆ.. ಒಬ್ಬ ಜಮೀರ್ ಎದುರಿಸಿ ಮೊದ್ಲು, ನಿಮ್ಮ ಅಕ್ರಮಗಳನ್ನ ಬಿಚ್ಚಿಡಬೇಕಾ ? ತಡೆದುಕೊಳ್ಳೋ ಶಕ್ತಿ ಇದ್ಯಾ?, ಸಿದ್ದು ಪರ ಜಮೀರ್ ಬ್ಯಾಟಿಂಗ್ ! 

22-08-24 10:33 pm       Bangalore Correspondent   ಕರ್ನಾಟಕ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದು ಲೋಕಾಯುಕ್ತ ಪೊಲೀಸರೇ ಹೊರತು, ಸಿಎಂ ಸಿದ್ದರಾಮಯ್ಯನವರಲ್ಲ. ಇದನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಬೆಂಗಳೂರು, ಆ 22: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದು ಲೋಕಾಯುಕ್ತ ಪೊಲೀಸರೇ ಹೊರತು, ಸಿಎಂ ಸಿದ್ದರಾಮಯ್ಯನವರಲ್ಲ. ಇದನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

" ಹತ್ತು ಜನ ಸಿದ್ದರಾಮಯ್ಯನವರು ಬಂದರೂ ನನ್ನನ್ನು ಏನೂ ಮಾಡೋಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ನಮ್ಮ ಮುಖ್ಯಮಂತ್ರಿಗಳನ್ನು ಯಾಕೆ ಈ ವಿಚಾರಕ್ಕೆ ಮಧ್ಯಕ್ಕೆ ಎಳೆಯುತ್ತಾರೆ? ಸಿದ್ದರಾಮಯ್ಯನವರ ವಿರುದ್ದ ಖಾಸಗಿಯವರು ಕೊಟ್ಟ ದೂರಾಗಿತ್ತು. ಕುಮಾರಸ್ವಾಮಿಯವರ ವಿರುದ್ದ ವಿಶೇಷ ತನಿಖಾ ದಳದವರು ವಿಚಾರಣೆಗೆ ಅನುಮತಿ ಕೋರಿದ್ದು " ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕನ್ನು ಕುಮಾರಸ್ವಾಮಿಯವರು ಹೊಂದಿಲ್ಲ. ಮುಡಾದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನಿದೆ, ಅವರ ಹೆಸರು ಅದರಲ್ಲಿ ಇದೆಯಾ ಎಂದು ಜಮೀರ್ ಅಹ್ಮದ್, ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

"ಬಿಜೆಪಿ ಸರ್ಕಾರ ಇರುವಾಗಲೇ ಸಿದ್ದರಾಮಯ್ಯನವರಿಗೆ 14 ಸೈಟ್ ಹಂಚಿಕೆಯಾಗಿದೆ. ಈಗ ರಾಜೀನಾಮೆ ನೀಡಬೇಕಾದವರು ಕುಮಾರಸ್ವಾಮಿಯವರೇ ಹೊರತು, ಸಿದ್ದರಾಮಯ್ಯ ಅಲ್ಲ. ಮಾತನಾಡಿದರೆ ಧಮ್ಕಿ ಹಾಕುವುದು, ಬ್ಯಾಕ್ ಮೇಲ್ ಮಾಡುವುದು. ಇದು ಎಷ್ಟು ದಿನಾಂತಾ ನಡೆಯುತ್ತೆ" ಎಂದು ಜಮೀರ್, ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

ನೂರು ಸಿದ್ದರಾಮಯ್ಯ ಯಾಕೆ ಒಬ್ಬ ಜಮೀರ್ ಅನ್ನು ಎದುರಿಸಿ. ದೇವರು ಬಾಯಿ ಕೊಟ್ಟಿದ್ದಾರೆ ಅಂತ ಏನು ಬೇಕಾದರೂ ಮಾತನಾಡಿದರೆ ನಡೆಯುವುದಿಲ್ಲ. ರಾಮನಗರ ಜಿಲ್ಲೆಯಲ್ಲಿ ಹಂಚಲಾಗಿರುವ ಮನೆಯ ಬಗ್ಗೆ, ಕುಮಾರಸ್ವಾಮಿಯವರು ಆ ಜಿಲ್ಲೆಯವರು ಎನ್ನುವ ಕಾರಣಕ್ಕಾಗಿ ಹೇಳಿದೆ ಎಂದು ಜಮೀರ್, ಸ್ಪಷ್ಟನೆಯನ್ನು ನೀಡಿದ್ದಾರೆ.

ಎರಡು ಬಸ್ಸುಗಳಿಗೆ ಒಂದು ನಂಬರ್ ಹಾಕಿ ಓಡಿಸುತ್ತಿದ್ದಾನೆ ಎಂದು ನನ್ನನ್ನು ಏಕವಚನದಲ್ಲಿ ಟೀಕಿಸಿದ್ದೀರಿ. ಆ ರೀತಿ ನಾನು ಮೋಸ ಮಾಡಿದ್ದರೆ 2017ರವರೆಗೆ ನನ್ನನ್ನು ಯಾಕೆ ನಿಮ್ಮ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಜಮೀರ್, ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿಯವರು ಉಲ್ಲೇಖಿಸಿರುವ ಘಟನೆ 2002ರಲ್ಲಿ. ಆ ಬಸ್ಸುಗಳು ನನ್ನ ಚಿಕ್ಕಪ್ಪನದ್ದು, ನನ್ನದಲ್ಲ. ನ್ಯಾಯಾಲಯದಿಂದ ನಾವು ಕ್ಲೀನ್ ಚಿಟ್ ತೆಗೆದುಕೊಂಡಿದ್ದೇವೆ. ಪದೇಪದೇ ಸುಳ್ಳನ್ನು ಹೇಳಿಕೊಂಡು ಬರಬೇಡಿ ಎಂದು ಜಮೀರ್, ಕುಮಾರಸ್ವಾಮಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಿಮ್ಮ ರೀತಿಯಲ್ಲಿ ಅಕ್ರಮವಾಗಿ ಯಾವುದೇ ಕೆಲಸವನ್ನು ಮಾಡಲಿಲ್ಲ, ಏನೇ ಇದ್ದರೂ ನನ್ನ ವ್ಯವಹಾರ ಪಾರದರ್ಶಕತೆಯಿಂದ ಕೂಡಿದೆ. ನಿಮ್ಮ ಒಂದೊಂದೇ ಅಕ್ರಮಗಳನ್ನು ಬಾಯಿಬಿಡಲಾ, ಅದನ್ನು ತಡೆದುಕೊಳ್ಳುವ ಶಕ್ತಿ ಇದೆಯಾ ಎಂದು ಜಮೀರ್, ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ.

Zameer ahmed slams Kumaraswamy says first face me the face Siddaramaiah. You are a blackmailer, if I reveal all your scams will you be able to face it he added