ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇರ್ ಸೆಂಟರ್ ಸ್ಥಾಪನೆ ; ಅಪಘಾತ ಸ್ಪಾಟ್ ಗಳಲ್ಲಿ 65 ನೂತನ ಅಂಬ್ಯುಲೆನ್ಸ್ ಸೇವೆ ;  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

27-08-24 08:07 pm       Bangalore Correspondent   ಕರ್ನಾಟಕ

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್ ಗಳನ್ನ ಮುಂಬರುವ ಒಂದು ತಿಂಗಳ ಒಳಗೆ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರು, ಆಗಸ್ಟ್‌ 27: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್ ಗಳನ್ನ ಮುಂಬರುವ ಒಂದು ತಿಂಗಳ ಒಳಗೆ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 150 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ‌ಪೂಜೆ ನೆರವೇರಿಸಿದರು.‌

Image

 

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೆ.ಸಿ ಜನರಲ್ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಬೋಧಕ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿಯ ಅನುದಾನ ಕೇಳಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು.‌

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಡಯಾಲಿಸಿಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, 750ಕ್ಕೂ ಹೆಚ್ಚು ಏಕಬಳಕೆಯ ಡಯಾಲಿಸಿಸ್ ಹೊಸ ಯಂತ್ರಗಳನ್ನ ಅಳವಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಶೇ.30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿಗಳು ಸರಬರಾಜು ಆಗುತ್ತಿದ್ದವು. ಇದೀಗ ಶೇ.70ರಷ್ಟು ಔಷಧಿಗಳನ್ನ ನಿಗಮದಿಂದ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಶೇ. 90ರಷ್ಟು ಔಷಧಿಗಳು ದೊರಕಿಸುವತ್ತ ಆರೋಗ್ಯ ಇಲಾಖೆ ಹೆಜ್ಜೆಯಿಟ್ಟಿದೆ ಎಂದರು. 

ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ಇಂದು ದೂರದ ನಗರ ಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಗಳಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್ ಗಳನ್ನ ತೆರೆಯಲಾಗುವುದು. ಮುಂಬರುವ ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಅಪಘಾತ ಸ್ಪಾಟ್ ಗಳಲ್ಲಿ ಪ್ರತ್ಯೇಕ ಆಂಬ್ಯುಲೆನ್ಸ್ 

ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.‌ 65 ನೂತನ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನ ಅಪಘಾತಕ್ಕೀಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. 

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸೇವೆಗಳನ್ನ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳು ಹಿಂದೆ ಬೀಳಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ವೈದ್ಯರುಗಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ಹೋಲಿಸಿದರೆ ಹೆಚ್ಚು ಅನುಭವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಹೈಟೆಕ್ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವಂತಾಗಬೇಕು. ಆಧುನಿಕ ಯುಗದಲ್ಲಿ ರೋಬೊಟಿಕ್ ಸರ್ಜರಿಗಳನ್ನ ನಡೆಸಲಾಗುತ್ತಿದೆ. ರೋಬೊಟಿಕ್ ಸರ್ಜರಿಯಂತಹ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಯಲ್ಲೂ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು.

Establishment of chemotherapy care center in all districts of Karnataka inaugurated by Health Minister Dinesh Gundurao and CM Siddaramaiah