Seabird, Karwar, NIA: ಸೀಬರ್ಡ್ ನೌಕಾನೆಲೆಯ ರಹಸ್ಯ ಸೋರಿಕೆ ; ಪಾಕಿಸ್ತಾನಿ ಏಜಂಟರಿಗೆ ಹಣಕ್ಕಾಗಿ ಮಾಹಿತಿ ರವಾನಿಸುತ್ತಿದ್ದ ಮೂವರ ಸೆರೆ, ಕಾರವಾರದಲ್ಲಿ ಎನ್ಐಎ ಕಾರ್ಯಾಚರಣೆ 

28-08-24 11:07 pm       HK News Desk   ಕರ್ನಾಟಕ

ಸೀಬರ್ಡ್ ನೌಕಾನೆಲೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಿ ಏಜಂಟರಿಗೆ ರವಾನಿಸುತ್ತಿದ್ದ ಆರೋಪದಲ್ಲಿ ಎನ್‌ಐಎ ಅಧಿಕಾರಿಗಳು ಕಾರವಾರದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಕಾರವಾರ, ಆಗಸ್ಟ್‌ 28: ಸೀಬರ್ಡ್ ನೌಕಾನೆಲೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಿ ಏಜಂಟರಿಗೆ ರವಾನಿಸುತ್ತಿದ್ದ ಆರೋಪದಲ್ಲಿ ಎನ್‌ಐಎ ಅಧಿಕಾರಿಗಳು ಕಾರವಾರದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ತೋಡೂರಿನ ಸುನೀಲ್ ನಾಯ್ಕ, ಮುದಗಾದ ವೇತನ್ ತಾಂಡೇಲ್, ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. 

ಹಣಕ್ಕಾಗಿ ಕದಂಬ ನೌಕಾನೆಲೆಯ ಫೋಟೋ, ಇತರೆ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್ಐ ಏಜಂಟರಿಗೆ ರವಾನಿಸುತ್ತಿದ್ದ ಆರೋಪ ಇವರ ಮೇಲಿದೆ. ಆರೋಪಿಗಳು ಈ ಹಿಂದೆ ಸೀಬರ್ಡ್ ನೌಕಾನೆಲೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎನ್‌ಐಎ ಡಿವೈಎಸ್ಪಿ ನೇತೃತ್ವದಲ್ಲಿ ಮೂವರು ಇನ್ಸಪೆಕ್ಟರ್‌, ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಆರೋಪದಲ್ಲಿ 2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಎಂಬಾತನನ್ನು ಎನ್ಐಎ ಅರೆಸ್ಟ್ ಮಾಡಿದ್ದು ಆ ಸಂದರ್ಭದಲ್ಲಿ ವಿದೇಶಿ ನೆಟ್ವರ್ಕ್ ಪತ್ತೆಯಾಗಿತ್ತು. ದೇಶದ ಒಳಗಿನ ರಹಸ್ಯಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯೂ ಸಿಕ್ಕಿತ್ತು. ದೀಪಕ್ ಹಾಗೂ ಇತರರ ತನಿಖೆ ವೇಳೆ ಕಾರವಾರದ ಮೂವರ ಹೆಸರು ತಿಳಿದುಬಂದಿತ್ತು. ಸೀಬರ್ಡ್ ನೌಕಾನೆಲೆಯ ಫೋಟೋ, ಮಾಹಿತಿ ರವಾನಿಸಿ ಕಾರ್ಮಿಕರು ಹಣ ಪಡೆದಿದ್ದರು. ಆಬಳಿಕ ಅಂಕೋಲಾದ ಅಕ್ಷಯ ನಾಯ್ಕ ನೌಕಾನೆಲೆ ತೊರೆದು ಗೋವಾದಲ್ಲಿ ಹೊಟೇಲ್ ಕೆಲಸಕ್ಕೆ ಸೇರಿದ್ದ. ಇದೀಗ ರಹಸ್ಯ ಕಾರ್ಯಾಚರಣೆಯಲ್ಲಿ ಮೂವರನ್ನು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಮೊಬೈಲ್ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. 

ಆರೋಪಿಗಳು ಹನಿಟ್ರಾಪ್ ಬಲೆಗೆ ಬಿದ್ದು ವಿದೇಶಿ ನೆಟ್ವರ್ಕ್ ಜೊತೆಗೆ ಶಾಮೀಲಾಗಿದ್ದರೆ, ಕೇವಲ ಹಣಕ್ಕಾಗಿ ಈ ಕೃತ್ಯ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ‌

Seabird Shipyard Secret Leak, NIA operation in Karwar, three arrested for info to Pakistani agents.