ಬೆಳಗಾವಿ ಬೈಎಲೆಕ್ಷನ್ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುತ್ತಾ ಬಿಜೆಪಿ ಗಣಿತ ?

09-12-20 04:43 pm       Headline Karnataka News Network   ಕರ್ನಾಟಕ

ಬೆಳಗಾವಿ ಲೋಕಸಭಾ ಸ್ಥಾನದ ಉಪ ಚುನಾವಣೆಗೆ ಬಿಜೆಪಿಯಿಂದ ಯಾರು ಅಭ್ಯರ್ಥಿ ಅನ್ನುವ ಬಗ್ಗೆ ಗೊಂದಲ ಶುರುವಾಗಿದೆ.

ಬೆಂಗಳೂರು, ಡಿ.3: ಬೆಳಗಾವಿ ಲೋಕಸಭಾ ಸ್ಥಾನದ ಉಪ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಬಹುತೇಕ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದರೆ, ಬಿಜೆಪಿಯಿಂದ ಯಾರು ಅಭ್ಯರ್ಥಿ ಅನ್ನುವ ಬಗ್ಗೆ ಗೊಂದಲ ಶುರುವಾಗಿದೆ. ಈ ನಡುವೆ, ಅಚ್ಚರಿಯ ಅಭ್ಯರ್ಥಿಯನ್ನು ಇಳಿಸುವ ಬಗ್ಗೆ ಬಿಜೆಪಿ ವಲಯದಲ್ಲಿ ಮಾತುಕತೆ ನಡೆಯುತ್ತಿದೆ.

ನಾಲ್ಕು ಬಾರಿಯ ಸಂಸದ, ಸಚಿವರಾಗಿದ್ದ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಬೆಳಗಾವಿ ಬಿಜೆಪಿ ಘಟಕದಿಂದ ಸುರೇಶ್ ಅಂಗಡಿಯವರ ಸಂಬಂಧಿಕರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಇದೆ. ಏನಿದ್ದರೂ, ಬೆಳಗಾವಿ ಬಿಜೆಪಿ ಪಾಲಿಗೆ ಭದ್ರಕೋಟೆ. ಸದ್ಯಕ್ಕೆ ಬೆಳಗಾವಿಯ ಹಲವರು ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಆಗದಂತೆ ಅಳೆದು ತೂಗಿ ತೀರ್ಮಾನ ತೆಗೆದುಕೊಳ್ಳುವುದರಲ್ಲಿ ನಾಯಕರಿದ್ದಾರೆ.

ಈ ನಡುವೆ, ಕಾಂಗ್ರೆಸಿನಿಂದ ಬೆಳಗಾವಿಯಲ್ಲಿ ಪ್ರಭಾವಿಯಾಗಿರುವ ಸತೀಶ್ ಜಾರಕಿಹೊಳಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸತೀಶ್ ಜಾರಕಿಹೊಳಿಯನ್ನು ಅಭ್ಯರ್ಥಿಯಾಗಿಸಿದರೆ ಅಲ್ಲಿ ವಿರೋಧ ಮಾಡುವವರು ಕಡಿಮೆ. ಮೇಲಾಗಿ ಬೆಳಗಾವಿಯ ಮಟ್ಟಿಗೆ ಪ್ರಭಾವಿ ನಾಯಕರು. ಇತ್ತ ಸೋದರ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿ, ಸಚಿವರಾಗಿದ್ದಾರೆ. ಸತೀಶ್ ಜಾರಕಿಹೊಳಿ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿದರೆ, ಬೆಳಗಾವಿ ಹುಲಿಗಳಾದ ರಮೇಶ್ – ಸತೀಶ್ ನಡುವೆಯೇ ಸ್ಪರ್ಧೆ ಏರ್ಪಟ್ಟಂತೆ ಆಗುತ್ತದೆ. ಆದರೆ, ಬೆಳಗಾವಿಯಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತಗಳೇ ಹೆಚ್ಚಿದ್ದು, ಗೆಲುವು ಸುಲಭದ ತುತ್ತು ಅನ್ನುವ ಲೆಕ್ಕಾಚಾರ ಇದೆ. ಹೀಗಾಗಿ ಸುರೇಶ್ ಅಂಗಡಿಯವರ ಪುತ್ರಿಗೆ ಟಿಕೆಟ್ ಕೊಡುವಂತೆ ಒತ್ತಡ ಏರ್ಪಟ್ಟಿದೆ.

ಸುರೇಶ್ ಅಂಗಡಿಯ ಕುಟುಂಬ ಮಾಜಿ ಸಿಎಂ ಮತ್ತು ಸದ್ಯ ಸಚಿವರಾಗಿರುವ ಜಗದೀಶ್ ಶೆಟ್ಟರ್ ಗೆ ಬೀಗರು. ಶೆಟ್ಟರ್ ಪುತ್ರನಿಗೆ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಜೊತೆಗೆ ಮದುವೆ ನಡೆದಿತ್ತು. ಹೀಗಾಗಿ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾಗೆ ಟಿಕೆಟ್ ಕೊಟ್ಟರೆ ಪರೋಕ್ಷವಾಗಿ ಶೆಟ್ಟರ್ ಸೊಸೆಗೇ ಟಿಕೆಟ್ ಕೊಟ್ಟಂತಾಗುತ್ತದೆ. ಅಂಗಡಿ ಪುತ್ರಿ ಅಥವಾ ಪತ್ನಿಗೆ ಟಿಕೆಟ್ ಕೊಡಬೇಕೆಂದು ಜಗದೀಶ್ ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ಲಾಬಿ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮಾತು ಕೇಳಿಬಂದಿದ್ದರಿಂದ ತಮ್ಮ ಅಭ್ಯರ್ಥಿ ವೀಕ್ ಆಗಬಾರದು ಎನ್ನುವ ಲೆಕ್ಕಾಚಾರ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರನ್ನೇ ಕಣಕ್ಕಿಳಿಸಿ ಗೆಲ್ಲಿಸಿದರೆ ಒಂದು ಸಚಿವ ಸ್ಥಾನವೂ ತೆರವಾಗುವುದು ಅನ್ನುವ ಗಣಿತ ಕೆಲವರದ್ದು. ಶೆಟ್ಟರ್ ಗೆ ಮಣೆ ಹಾಕುವುದಿದ್ದರೆ ಬೆಳಗಾವಿ ನಾಯಕರು ಮತ್ತು ಸುರೇಶ್ ಅಂಗಡಿ ಕುಟುಂಬದ್ದೂ ಆಕ್ಷೇಪ ಇರಲಿಕ್ಕಿಲ್ಲ. ಅಲ್ಲದೆ, ರಾಜ್ಯದಲ್ಲಿ ಪ್ರಭಾವಿ ಲಿಂಗಾಯತ ಲೀಡರ್ ಆಗಿರುವ ಮತ್ತೊಬ್ಬರನ್ನು ಕೇಂದ್ರಕ್ಕೆ ಕಳಿಸುವ ತಂತ್ರಗಾರಿಕೆ ಇದೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರವನ್ನು ಕೇಸರಿ ನಾಯಕರು ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರನ್ನು ಬದಲಾಯಿಸುವ ಮಾತು ಕೇಳಿಬಂದಾಗ, ಸಿಎಂ ಸ್ಥಾನಕ್ಕೆ ಸುರೇಶ್ ಅಂಗಡಿ ಹೆಸರು ಕೇಳಿಬಂದಿತ್ತು. ಯಡಿಯೂರಪ್ಪ ಆಪ್ತರೂ ಆಗಿದ್ದ ಅಂಗಡಿಯವರ ನೇಮಕಕ್ಕೆ ಒಲವನ್ನೂ ಹೊಂದಿದ್ದರು. ಬಿಜೆಪಿ ಹೈಕಮಾಂಡ್ ಕೂಡ ಬೆಳಗಾವಿಗೆ ಸಿಎಂ ಸ್ಥಾನ ಕೊಟ್ಟು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಗಟ್ಟಿ ತಳಪಾಯ ಹಾಕುವ ಚಿಂತನೆಯಲ್ಲಿತ್ತು. ಆದರೆ, ಸುರೇಶ್ ಅಂಗಡಿ ಅಕಾಲ ಮೃತ್ಯುವಾಗಿದ್ದಾರೆ. ಈಗ ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಭಾವಿ ಮುಖಂಡ ಶೆಟ್ಟರ್ ಅವರನ್ನು ಸಂಸತ್ತಿಗೆ ಕಳಿಸಿದರೆ, ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡದಂತೆ ತಡೆಯುವ ಗಣಿತ ಇನ್ನೊಂದು ಬಣದ್ದಿದೆ. ಶೆಟ್ಟರ್ ಕೇಂದ್ರಕ್ಕೆ ಹೋದರೆ ಮಂತ್ರಿಯಾಗುವ ಸಾಧ್ಯತೆಯೂ ಅಧಿಕ. ಇವೆಲ್ಲ ಲೆಕ್ಕಾಚಾರಗಳನ್ನು ಕೇಸರಿ ನಾಯಕರು ಮಾಡುತ್ತಿದ್ದಾರೆ.