Bangalore, P Murthy Ambedkar Sene ಫೋರ್ಜರಿ ದಾಖಲೆ ಸೃಷ್ಟಿಸಿ ಖಾಸಗಿ ಜಾಗ ಮತ್ತೊಬ್ಬರಿಗೆ ಮಾರಾಟ ; ಸಬ್ ರಿಜಿಸ್ಟ್ರಾರ್ ಭ್ರಷ್ಟಾಚಾರದ ಬಗ್ಗೆ ಆರೋಪ, ಕಂದಾಯ ಸಚಿವರ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ

06-09-24 09:49 pm       Bangalore Correspondent   ಕರ್ನಾಟಕ

ಖಾಸಗಿ ಜಾಗವನ್ನು ಫೋರ್ಜರಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ ಬಗ್ಗೆ ವ್ಯಕ್ತಿಯೊಬ್ಬರು ಸರ್ಜಾಪುರ ಠಾಣೆಗೆ ದೂರು ನೀಡಿದ್ದು, ಸಬ್ ರಿಜಿಸ್ಟ್ರಾರ್ ಅಧಿಕಾರಿ ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಸೆ.6: ಖಾಸಗಿ ಜಾಗವನ್ನು ಫೋರ್ಜರಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ ಬಗ್ಗೆ ವ್ಯಕ್ತಿಯೊಬ್ಬರು ಸರ್ಜಾಪುರ ಠಾಣೆಗೆ ದೂರು ನೀಡಿದ್ದು, ಸಬ್ ರಿಜಿಸ್ಟ್ರಾರ್ ಅಧಿಕಾರಿ ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸರ್ಜಾಪುರ ಹೋಬಳಿ ಕೂತಗಾನಹಳ್ಳಿ ಗ್ರಾಮದಲ್ಲಿ 1200 ಅಡಿ ವಿಸ್ತೀರ್ಣದ ಜಾಗವನ್ನು ಎ.ಎಸ್.ಸರವಣ ಕುಮಾರ್ ಎಂಬವರಿಗೆ ಆಸ್ಪಿ ರವೀಂದ್ರನಾಥ ರೆಡ್ಡಿ ಎಂಬವರು ಮಾರಾಟ ಮಾಡಿದ್ದರು. 2022ರ ಫೆಬ್ರವರಿ 9ರಂದು ಈ ಬಗ್ಗೆ ಕ್ರಯ ಪತ್ರ ಬರೆದುಕೊಟ್ಟು ರಿಜಿಸ್ಟರ್ ಆಗಿತ್ತು. ಅದನ್ನು ಬಳಿಕ ಸರವಣ ಕುಮಾರ್ ತನ್ನ ಅಣ್ಣ ರಾಜೇಶ್ ಕುಮಾರ್ ಎಂಬವರಿಗೆ ಜಿಪಿಎ ಮಾಡಿಕೊಟ್ಟಿದ್ದರು.

ಈ ನಡುವೆ 2024ರ ಮಾರ್ಚ್ 11ರಂದು ಸರವಣ ಕುಮಾರ್ ಹೆಸರಿನಲ್ಲಿ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಸದ್ರಿ ಜಾಗವನ್ನು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕೊಂಡಾರಾಮ ಸುಬ್ಬಾರೆಡ್ಡಿ ಎಂಬವರಿಗೆ ಮಾರಾಟ ಮಾಡಿದ್ದಾಗಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆರೋಪಿಗಳಾದ ಆಸ್ಪಿ ರವೀಂದ್ರನಾಥ ರೆಡ್ಡಿ, ಸಂಧ್ಯಾ ಚಾಂದ್, ಸೆಮಿ ಜೇಕಬ್, ನವೀನ್, ವೇಣುಗೋಪಾಲ ರೆಡ್ಡಿ, ಕೊಂಡರಾಮ ಸುಬ್ಬಾರೆಡ್ಡಿ ಮತ್ತು ಸಬ್ ರಿಜಿಸ್ಟ್ರಾರ್ ರಾಮದಾಸ ಗೌಡ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದಾರೆಂದು ವಂಚನೆಗೊಳಗಾದ ರಾಜೇಶ್ ಕುಮಾರ್ ಸರ್ಜಾಪುರ ಪೊಲೀಸ್ ಠಾಣೆಗೆ ಆಗಸ್ಟ್ 28ರಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದಲ್ಲದೆ, ತನಗೆ ಅನ್ಯಾಯವಾಗಿದ್ದು ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಾಜೇಶ್ ಕುಮಾರ್ ಬೆಂಗಳೂರಿನ ಅಂಬೇಡ್ಕರ್ ಸೇನಾ ಸಂಘಟನೆಯವರಿಗೂ ದೂರು ನೀಡಿದ್ದಾರೆ. ಅಂಬೇಡ್ಕರ್ ಸೇನೆಯ ಪ್ರಮುಖರಾದ ಪಿ. ಮೂರ್ತಿ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಮನೆಯ ಮುಂದೆ ಸೆ.11ರ ಬುಧವಾರ ಪ್ರತಿಭಟನೆ ನಡೆಸುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಖಚಿತ ದಾಖಲೆಗಳನ್ನು ಹೊಂದಿದ್ದರೂ, ಸಬ್ ರಿಜಿಸ್ಟ್ರಾರ್ ಮತ್ತೊಮ್ಮೆ ಅದೇ ಜಾಗವನ್ನು ನಕಲಿಯಾಗಿ ರಿಜಿಸ್ಟರ್ ಮಾಡಿದ್ದು ಹೇಗೆ. ಪ್ರತಿ ದಾಖಲೆಯೂ ಕಂಪ್ಯೂಟರ್ ನಲ್ಲಿ ದಾಖಲಾಗುವ ಸಂದರ್ಭದಲ್ಲಿ ಈ ರೀತಿ ಮಾಡುವುದು ಭ್ರಷ್ಟಾಚಾರದ ಪರಮಾವಧಿ ಎಂದು ಪ್ರತಿಕ್ರಿಯಿಸಿದ್ದಾರೆ.

Bangalore Fake sale deed document of land created and sold, FIR filed against sub registrar of attibele, Bangalore Ambedkar Sena P Murthy warns of protest and gherao against revenue minister Krishna Byre Gowda. P Murthy also has demanded suspension of sub registrar of attibele Ramdase Gowda.