Doctor attack Chikkamagaluru: ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರ ಮೇಲೆ ಹಲ್ಲೆ ; ಕೊರಳ ಪಟ್ಟಿ ಹಿಡಿದು ಚಪ್ಪಲಿಯೇಟು ನೀಡಿದ ಮಹಿಳೆ, ಓಪಿಡಿ ಬಂದ್ ಮಾಡಿ ಸಿಬಂದಿ ಪ್ರತಿಭಟನೆ, ಮಹಿಳೆಯ ರಂಪಾಟ ವಿಡಿಯೋ ವೈರಲ್ 

10-09-24 08:36 pm       HK News Desk   ಕರ್ನಾಟಕ

ಅರಣಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಯ ಕುಟುಂಬಸ್ಥರು ಸೇರಿ ಸರ್ಕಾರಿ ವೈದ್ಯರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಕೃತ್ಯವನ್ನು ಖಂಡಿಸಿ ಆಸ್ಪತ್ರೆಯ ಓಪಿಡಿ ಬಂದ್‌ ಮಾಡಿ ವೈದ್ಯರು ಮತ್ತು ಇತರ ಸಿಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. 

ಚಿಕ್ಕಮಗಳೂರು, ಸೆ.10: ಅರಣಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಯ ಕುಟುಂಬಸ್ಥರು ಸೇರಿ ಸರ್ಕಾರಿ ವೈದ್ಯರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಕೃತ್ಯವನ್ನು ಖಂಡಿಸಿ ಆಸ್ಪತ್ರೆಯ ಓಪಿಡಿ ಬಂದ್‌ ಮಾಡಿ ವೈದ್ಯರು ಮತ್ತು ಇತರ ಸಿಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. 

ಜಿಲ್ಲಾಸ್ಪತ್ರೆಯ ಮೂಳೆ ತಜ್ಞ ಡಾ.ಬಿ.ಎಸ್. ವೆಂಕಟೇಶ್ ಅವರ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ ಮಹಿಳೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ತಂಡದಿಂದ ಹಲ್ಲೆಗೀಡಾಗಿದ್ದ ಇರ್ಫಾನ್ ಎಂಬಾತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಿದ ವೈದ್ಯರು ಬಳಿಕ ಬೇರೆ ರೋಗಿಯ ಚಿಕಿತ್ಸೆಗೆ ಮುಂದಾಗಿದ್ದಾರೆ. ಈ ವೇಳೆ, ರೋಗಿಯ ಅಕ್ಕ ಸೇರಿದಂತೆ ಇತರ ಕುಟುಂಬ ಸದಸ್ಯರು ಆಸ್ಪತ್ರೆ ಒಳಗಡೆ ಬಂದಿದ್ದು ಗುಂಪು ಸೇರಿದ್ದಾರೆ. ವೈದ್ಯರು ಇಷ್ಟು ಮಂದಿ ಒಳಗಡೆ ಬರಬೇಡಿ ಎಂದು ಗಟ್ಟಿ ಧ್ವನಿಯಲ್ಲಿ ಗದರಿದ್ದಾರೆ. ಇದೇ ವೇಳೆ, ಮಾತಿಗೆ ಮಾತು ಬೆಳೆದು ಮಹಿಳೆಯೇ ವೈದ್ಯನ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದು ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿದ್ದಾರೆ. ಆನಂತರ, ಬೆಡ್ ನಲ್ಲಿದ್ದ ಇರ್ಫಾನ್ ಮತ್ತು ಇತರ ಮುಸ್ಲಿಂ ಸದಸ್ಯರು ಸೇರಿದ್ದು ವೈದ್ಯನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 

ಆನಂತರ, ಆಸ್ಪತ್ರೆಯ ಇತರ ಸಿಬಂದಿ ಸೇರಿ ವೈದ್ಯರನ್ನು ಎಳೆದು ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ತಮಗೆ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ಬಂದು ಧರಣಿ ನಿರತರನ್ನು ಸಮಾಧಾನಿಸಿ ಆರೋಪಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಹಲ್ಲೆ ನಡೆಸುವ ವಿಡಿಯೋವನ್ನು ಇತರ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧಿಸಿ ವೈದ್ಯರು ನೀಡಿದ ದೂರಿನಂತೆ ಹಲ್ಲೆಗೈದ ತಸ್ಲಿಂ ಎಂಬ ಮಹಿಳೆ ಮತ್ತು ಇರ್ಫಾನ್ ಎಂಬವರ ಮೇಲೆ ಎಫ್ಐಆರ್ ದಾಖಲಾಗಿದೆ. 

ಘಟನೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಗೃಹ ಸಚಿವರನ್ನು ಪ್ರಶ್ನೆ ಮಾಡಿದ್ದು ಇದೇನಾ ನಿಮ್ಮ ಆಡಳಿತ ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

The doctors and staff of the District Hospital in Chikkamagaluru shut down the outpatient department and began a protest after a woman hurled a footwear and pulled a doctor by his collar who was on duty, on Tuesday.