ಸಿಎಂ ಸಿದ್ದರಾಮಯ್ಯ ಪ್ರಕರಣ, ಹೈಕೋರ್ಟ್ ವಿಚಾರಣೆ ಮುಕ್ತಾಯ ; ಫೈನಲ್ ಡೇಯಲ್ಲಿ ಅಭಿಷೇಕ್ ಸಿಂಘ್ವಿ ವಾದ, ತೀರ್ಪು ಕಾಯ್ದಿರಿಸಿದ ನ್ಯಾಯಪೀಠ 

12-09-24 10:41 pm       Bangalore Correspondent   ಕರ್ನಾಟಕ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ತಿಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ.

ಬೆಂಗಳೂರು, ಸೆ.12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ತಿಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ.

ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಎಂ. ನಾಗಪ್ರಸನ್ನ ಅವರು, ತೀರ್ಪು ಕಾಯ್ದಿರಿಸಿದ್ದು ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯಪಾಲರ ಪರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ರಾಜ್ಯ ಸರ್ಕಾರದ ಪರವಾಗಿ ಶಶಿಕಿರಣ್​ ಶೆಟ್ಟಿ ವಾದ ಮಂಡಿಸಿದ್ದಾರೆ. ಗುರುವಾರ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡಿಸಿದರು. 

ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ರಾಷ್ಟ್ರಪತಿ ಆಳ್ವಿಕೆಗಿಂತ ಹೆಚ್ಚು ರಾಜಕೀಯ ಪ್ರೇರಿತ. ಸೆಕ್ಷೆನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ. ಎಲ್ಲಾ ಪ್ರಕರಣಗಳಲ್ಲೂ ಸಚಿವ ಸಂಪುಟ ಸಿಎಂ ಪರ ಇದೆ, ತಾರತಮ್ಯ ಮಾಡಿದೆ ಎನ್ನಲಾಗದು. ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಗಳು ಬೇರೆ ಬೇರೆ ಅಭಿಪ್ರಾಯ ಮಂಡಿಸಬಹುದು ಎಂದು ಅಭಿಷೇಕ್​ ಮನು ಸಿಂಘ್ವಿ ವಾದಿಸಿದರು.

ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಪಾಲಿಸಲೇಬೇಕೆಂದಿಲ್ಲ. ಆದರೆ ಭಿನ್ನ ನಿಲುವಿಗೆ ಕಾರಣ ನೀಡಬೇಕೆಂಬುದು ನಿಮ್ಮ ವಾದವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, ಸಚಿವ ಸಂಪುಟದ ಶಿಫಾರಸನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸು ತಪ್ಪೆಂದು ಹೇಳಿಲ್ಲ. ಹೀಗಾಗಿ ಕಾರಣವೇ ಹೇಳದೆ ಸಚಿವ ಸಂಪುಟದ ಕ್ರಮ ತಾರತಮ್ಯಪೂರಿತ ಎನ್ನಲಾಗದು ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಸುಧೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ತೀರ್ಪು ಕಾಯ್ದಿರಿಸಿದ್ದಾರೆ.

The Karnataka High Court on Thursday completed its hearing on Chief Minister Siddaramaiah's petition challenging the legality of Governor Thaawarchand Gehlot's approval for his prosecution in the Mysuru Urban Development Authority (MUDA) case, and reserved its orders.