Bharath Bommai nomination, Shiggaon: ಶಿಗ್ಗಾ‌ಂವಿಗೆ ಬೊಮ್ಮಾಯಿ ಕುಟುಂಬದ ಮತ್ತೊಂದು ಕುಡಿ ಎಂಟ್ರಿ ; ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೆಸರಲ್ಲಿ ವಾಹನ ಇಲ್ಲ, 16 ಕೋಟಿ ಆಸ್ತಿ ಘೋಷಣೆ 

24-10-24 08:52 pm       HK News Desk   ಕರ್ನಾಟಕ

ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ತನ್ನ ಅಫಿಡವಿಟ್ ನಲ್ಲಿ 16.17 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. 

ಹಾವೇರಿ, ಅ.24: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ತನ್ನ ಅಫಿಡವಿಟ್ ನಲ್ಲಿ 16.17 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. 

ಭರತ್‌ ಬೊಮ್ಮಾಯಿ ತನ್ನ ಕೈಯಲ್ಲಿ 2.03 ಲಕ್ಷ ರೂ. ನಗದು ಹಣ ಹೊಂದಿದ್ದಾಗಿ ಹೇಳಿಕೊಂಡಿದ್ದು ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ  1.19 ಕೋಟಿ ಹೊಂದಿದ್ದಾರೆ. 

ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ , ಖಾಸಗಿ ಕಂಪನಿಗಳಲ್ಲಿ 50 ಸಾವಿರ, ಪಾಲುದಾರಿಕೆ ಕಂಪನಿಯಲ್ಲಿ 1.23 ಕೋಟಿ ರು. ಬಂಡವಾಳ ತೊಡಗಿಸಿದ್ದಾರೆ. 

ಗೋಲ್ಡ್‌ ಚಿಟ್‌ ಫಂಡ್‌ನಲ್ಲಿ 70 ಸಾವಿರ, ಮ್ಯೂಚುವಲ್‌ ಫಂಡ್‌ನಲ್ಲಿ  10.20 ಲಕ್ಷ ತೊಡಗಿಸಿದ್ದಾರೆ. ಇದಲ್ಲದೆ, 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು  3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಭರತ್ ಬೊಮ್ಮಾಯಿ ತನ್ನ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲ. 

ಬೆಂಗಳೂರಿನ ಆರ್‌.ಟಿ.ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 5.50 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಇಬ್ಬನಿ ಬಳಿ 1.43 ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ  56.32 ಲಕ್ಷ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 33 .75 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದಾರೆ. ಪಾಲುದಾರಿಕೆ ವ್ಯವಹಾರದಲ್ಲಿ  31.12 ಲಕ್ಷ ತೊಡಗಿಸಿದ್ದಾರೆ. ಪತ್ನಿಯ ಹೆಸರಿನಲ್ಲಿ ಮಾರುತಿ ಸ್ವಿಫ್ಟ್‌ ಕಾರು ಹೊಂದಿದ್ದಾರೆ. ಇವರಲ್ಲಿ 8.16 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. 

ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್‌, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಇದೆ. ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.  ಇವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟಾರೆ ಭರತ್‌ ಬೊಮ್ಮಾಯಿ 16.17 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ.

Six candidates, including the former Chief Minister Basavaraj Bommai’s son Bharath Bommai, filed their nomination papers for the byelections to Shiggaon Assembly Constituency on Thursday taking the total number of nomination papers filed to 21.