ಅವಿಶ್ವಾಸ ಗೊತ್ತುವಳಿ ; ಸಭಾಪತಿ ಕೆಳಗಿಳಿಸುವುದೇ ಬಿಜೆಪಿ ಅಜೆಂಡಾ

14-12-20 04:16 pm       Bangalore Correspondent   ಕರ್ನಾಟಕ

ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ತಯಾರಿ ನಡೆಸಿದೆ.

ಬೆಂಗಳೂರು, ಡಿ.14: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ತಯಾರಿ ನಡೆಸಿದೆ. ಈಗಾಗ್ಲೇ ಅವಿಶ್ವಾಸ ಗೊತ್ತುವಳಿ ನೋಟೀಸ್ ನೀಡಿದ್ದು, ನಾಳೆ (ಮಂಗಳವಾರ) ನಡೆಯಲಿರುವ ಒಂದು ದಿನದ ಅಧಿವೇಶನದಲ್ಲಿ ಸಭಾಪತಿಯನ್ನು ತೆರವು ಮಾಡುವುದೇ ಬಿಜೆಪಿ ವನ್ ಲೈನ್ ಅಜೆಂಡಾ ಎನ್ನಲಾಗುತ್ತಿದೆ.

ಕಳೆದ ಗುರುವಾರ ಪರಿಷತ್ ಕಲಾಪವನ್ನು ದಿಢೀರ್ ಆಗಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಪ್ರತಾಪರ ಈ ನಡೆ ಬಿಜೆಪಿಗೆ ಮುಖಕ್ಕೆ ಹೊಡೆದ ರೀತಿ ಆಗಿತ್ತು. ಹೀಗಾಗಿ ವಿಶೇಷ ಸದನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರನ್ನು ಒತ್ತಾಯ ಮಾಡಿತ್ತು. ಅವಿಶ್ವಾಸ ನೋಟೀಸ್ ನೀಡಿ, 15 ದಿನಗಳಾಗಿದ್ದು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿತ್ತು.

ಆದರೆ, ಪ್ರತಾಪಚಂದ್ರ ಶೆಟ್ಟಿ ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿ ನೋಟೀಸ್ ನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಕಾನೂನು ಸಲಹೆ ಪಡೆದು ಮುಂದುವರಿಯುವುದಾಗಿ ಹೇಳಿದ್ದರು. ಈ ವಿಧಾನ ಪರಿಷತ್ ಮೂಲಗಳು, ಸಭಾಪತಿಯ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದರೆ, ಅದನ್ನು ಖುದ್ದಾಗಿ ಎದುರಿಸಬೇಕು. ಸದನವೇ ಸರ್ವೋಚ್ಚವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಆಗಬೇಕು ಎನ್ನಲಾಗುತ್ತಿದೆ.

ಈ ನಡುವೆ, ಪರಿಷತ್ ಸಭಾಪತಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲವನ್ನೂ ಪಡೆದಿದೆ. ಕಾಂಗ್ರೆಸ್- ಜೆಡಿಎಸ್ ಸಂಬಂಧ ಹಳಸಿರುವುದರಿಂದ ಜೆಡಿಎಸ್ ನಾಯಕರು ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಈ ವಿಚಾರ ಪರಿಷತ್ ಸಭಾಪತಿಯನ್ನು ಬದಲಾಯಿಸಲು ಸಹಕಾರ ಆಗಲಿದೆ.

ಈ ನಡುವೆ, ಕಳೆದ ವಾರ ವಿಧಾನಸಭೆ ಅಂಗೀಕರಿಸಿದ್ದ ಗೋಹತ್ಯೆ ವಿಚಾರವೂ ಪರಿಷತ್ ಕಲಾಪದಲ್ಲಿ ಅಂಗೀಕಾರ ಆಗಬೇಕಿದೆ. ಆದರೆ, ಅದನ್ನು ಪರಿಷತ್ ಕಲಾಪದಲ್ಲಿ ಮೊನ್ನೆ ಮಂಡನೆ ಮಾಡಿಲ್ಲ. ಅದು ಕೂಡ ಬಿಜೆಪಿ ಪಾಲಿಗೆ ಮಹತ್ವದ್ದಾಗಿದ್ದು, ಪರಿಷತ್ತಿನಲ್ಲಿ ಮಂಡನೆಯಾಗಿ ಅನುಮೋದನೆ ಪಡೆಯದಿದ್ದರೆ ಕಾನೂನಾಗಿ ಬರುವುದಿಲ್ಲ. ಮುಂದಿನ ಅಧಿವೇಶನಕ್ಕಾಗಿ ಕಾಯಬೇಕಾಗುತ್ತದೆ. ಹೀಗಾಗಿ ಮಂಗಳವಾರದ ಒಂದು ದಿನದ ಅಧಿವೇಶನದಲ್ಲಿ ಬಿಜೆಪಿ ಪಾಲಿಗೆ ಎರಡು ವಿಚಾರವೂ ಮಹತ್ವದ್ದಾಗಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕರು ಕೂಡ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಮೊದಲಿಗೆ ಮಂಡನೆಯಾಗಿ ಗದ್ದಲ ಏರ್ಪಟ್ಟರೆ, ಕಲಾಪವನ್ನು ಮತ್ತೆ ಮುಂದೂಡುವ ತಂತ್ರವೂ ಅಡಗಿದೆ.