ದೊಡ್ಡ ಗೌಡ್ರ ಭೇಟಿ ; ಮಾತಿನ ಮಲ್ಲ ಸಿಎಂ ಇಬ್ರಾಹಿಂ ಜೆಡಿಎಸ್ ಸೇರಲು ವೇದಿಕೆ ರೆಡಿ

14-12-20 05:00 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಿ.ಎಂ.ಇಬ್ರಾಹಿಂ ಸೋಮವಾರ ಬೆಳಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು, ಡಿ.14: ಈಗಾಗ್ಲೇ ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಿ.ಎಂ.ಇಬ್ರಾಹಿಂ ಸೋಮವಾರ ಬೆಳಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಕಳೆದೊಂದು ವಾರದಿಂದ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುತ್ತಾರೆಂದು ವದಂತಿ ಹಬ್ಬಿದೆ. ಈ ಬಗ್ಗೆ ಮಾಧ್ಯಮದ ಪ್ರಶ್ನೆಗೆ, ಸ್ವತಃ ಸಿಎಂ ಇಬ್ರಾಹಿಂ, ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದು ಹೌದು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಎಚ್ಡಿ ಕುಮಾರಸ್ವಾಮಿ ಅವರೇ ಆಫರ್ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆನಂತರ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ರಾಜಕೀಯ ಸಂಚಲನವೂ ಆಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವತಃ ಸಿಎಂ ಇಬ್ರಾಹಿಂ ಮನೆಗೆ ತೆರಳಿ, ಮನವೊಲಿಸುವ ಕೆಲಸವನ್ನೂ ಮಾಡಿದ್ದರು. ಕಾಂಗ್ರೆಸಿನಲ್ಲಿ ಮಹತ್ವದ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಿದ್ದರು.

ಇವೆಲ್ಲ ಬೆಳವಣಿಗೆಗಳ ನಡುವೆ, ಸಿಎಂ ಇಬ್ರಾಹಿಂ ಕುಮಾರಸ್ವಾಮಿಯವರ ಜೊತೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಶಾಸಕ ಮಂಜುನಾಥ್, ಮಾಜಿ ಶಾಸಕ ಸುರೇಶ್ ಬಾಬು ಜೊತೆಗಿದ್ದರು.

ಜೆಡಿಎಸ್ ಸೇರಿ ಪಕ್ಷವನ್ನು ಲೀಡ್ ಮಾಡುವಂತೆ ಸ್ವತಃ ಕುಮಾರಸ್ವಾಮಿ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ದೇವೇಗೌಡರ ಜೊತೆಗಿನ ಮಾತುಕತೆಯ ಬಳಿಕ ಜೆಡಿಎಸ್ ನಲ್ಲಿ ಮಹತ್ವದ ಸ್ಥಾನದ ಬಗ್ಗೆ ಚರ್ಚೆಯಾಗಿರುವ ಸಾಧ್ಯತೆಯಿದೆ. ಈಗಾಗ್ಲೇ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಸ್ಥಾನ ಲಭಿಸದ ಕಾರಣ ಸಿಎಂ ಇಬ್ರಾಹಿಂ ಬೇಸರಗೊಂಡಿದ್ದರು. ಕಳೆದ ಬಾರಿ ಪರಿಷತ್ ಪ್ರತಿಪಕ್ಷ ಸ್ಥಾನ ಲಭಿಸಲಿದೆ ಎನ್ನುವ ಮಾತು ಕೇಳಿಬಂದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತನಾಗಿದ್ದರೂ ಪಕ್ಷದಲ್ಲಿ ಯಾವುದೇ ಸ್ಥಾನ ಲಭಿಸದ ವಿಚಾರ ಇಬ್ರಾಹಿಂ ಅವರಿಗೆ ಬೇಸರ ತರಿಸಿತ್ತು. ಇದೀಗ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನವೇ ಸಿಗಲಿದೆ ಎನ್ನಲಾಗುತ್ತಿದೆ.

ಈಗ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಕೈಮೇಲಾಗುತ್ತಿರುವುದರಿಂದ ಸದ್ಯಕ್ಕೆ ತನಗೆ ಸ್ಥಾನ ಸಿಗದು ಎಂಬ ಖಾತ್ರಿಯಿಂದಲೇ ಪಕ್ಷದಿಂದ ಕಾಲು ಹೊರಗಿಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈ ಹಿಂದೆ ಜೆಡಿಎಸ್ ನಲ್ಲೇ ಇದ್ದ ಸಿಎಂ ಇಬ್ರಾಹಿಂ ಎಂಟತ್ತು ಭಾಷೆಯನ್ನು ಬಲ್ಲ ಪ್ರಖಂಡ ಪಂಡಿತ. ಭಾಷಣಕ್ಕೆ ನಿಂತರೆ ಮಾತಿನ ಮಲ್ಲ ಎಂಬ ಹೆಗ್ಗಳಿಕೆ ಇರುವ ಮಂಗಳೂರು ಮೂಲದ ಇಬ್ರಾಹಿಂ ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮೊದಲೇ ಕಾಂಗ್ರೆಸ್ ಸೇರಿದ್ದರು. ಇದೀಗ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರನ್ನೇ ಸೆಳೆದುಕೊಂಡು ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿರುವ ಮುಸ್ಲಿಮರನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಇದರ ಹಿಂದಿದೆ. ಈಮೂಲಕ ಮುಂದಿನ ಚುನಾವಣೆಗೆ ರೆಡಿಯಾಗುವ ದೂರಾಲೋಚನೆ ಗೌಡರ ಬಳಗದ್ದು. ಈ ಪ್ಲಾನ್ ಸಕ್ಸಸ್ ಆದರೆ, ಮುಂದಿನ ಬಾರಿಯೂ ಜೆಡಿಎಸ್ ಕಿಂಗ್ ಮೇಕರ್ ಆಗಬಲ್ಲದು ಎನ್ನುವ ಮಹತ್ವಾಕಾಂಕ್ಷೆ ಗೌಡರಿಗಿದೆ.