ಗೋಹತ್ಯೆ ನಿಷೇಧ ಕಾಯ್ದೆಗೆ ಜೆಡಿಎಸ್ ವಿರೋಧ ; ದೇವೇಗೌಡ

15-12-20 02:15 pm       Bangalore Correspondent   ಕರ್ನಾಟಕ

ಗೋಹತ್ಯೆ ನಿಷೇಧ ಕಾಯ್ದೆಯನ್ನು ಜೆಡಿಎಸ್ ವಿರೋಧಿಸಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಡಿ.15:  ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜೆಡಿಎಸ್ ವಿರೋಧಿಸಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸರಕಾರ ಜಾರಿಗೆ ತರುತ್ತಿರುವ ಗೋಹತ್ಯೆ ನಿಷೇಧ ಕಾನೂನು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಲಿದೆ. ಜನರ ಶಾಂತಿಯನ್ನು ಹಾಳು ಮಾಡಲಿದೆ. ಆದ್ದರಿಂದ ಈ ಪ್ರಸ್ತಾವಿತ ಮಸೂದೆಯನ್ನು ಜೆಡಿಎಸ್ ವಿರೋಧಿಸಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ 1964ರ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಅದನ್ನು ಬದಲಾಯಿಸಲು ಈ ಹಿಂದೆಯೂ 2010ರಲ್ಲಿ ಬಿಜೆಪಿ ಸರಕಾರ ಪ್ರಯತ್ನ ಪಟ್ಟಿತ್ತು. ಆದರೆ, ಅದನ್ನು ವಿರೋಧಿಸಿ ಆಗಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ರಾಜ್ಯಪಾಲರು ಮತ್ತು ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು. ಆನಂತರ ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾಗಿ ಈ ಪ್ರಸ್ತಾವ ನೆನೆಗುದಿಗೆ ಬಿದ್ದಿತ್ತು ಎಂದು ದೇವೇಗೌಡರು ಹೇಳಿದ್ದಾರೆ.

ಈ ಹಿಂದಿನಂತೇ ಗೋಹತ್ಯೆ ನಿಷೇಧ ಕಾನೂನನ್ನು ಜೆಡಿಎಸ್ ಸಂಪೂರ್ಣವಾಗಿ ವಿರೋಧಿಸುತ್ತದೆ. ಹಳೆಯ ಕಾನೂನಿನಲ್ಲೇ ಗೋಹತ್ಯೆ ತಡೆಗೆ ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ.