ಬಿಜೆಪಿಯ ಗೂಂಡಾಗಿರಿ ಪ್ರಜಾಪ್ರಭುತ್ವದ ಕಪ್ಪು ಅಧ್ಯಾಯ ; ಸಿದ್ದರಾಮಯ್ಯ

16-12-20 10:44 am       Bangalore Correspondent   ಕರ್ನಾಟಕ

ಮೇಲ್ಮನೆಯಲ್ಲಿ ನಡೆದ ಗದ್ದಲಕ್ಕೆ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಬೆಂಗಳೂರು, ಡಿ.15: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿ ಮೇಲ್ಮನೆಯಲ್ಲಿ ನಡೆದ ಗದ್ದಲಕ್ಕೆ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇಂತಹ ಸ್ಥಿತಿ ಎಂದೂ ಬಂದಿರಲಿಲ್ಲ. ಈ ರೀತಿಯ ಗೂಂಡಾಗಿರಿ ಪ್ರಜಾಪ್ರಭುತ್ವಕ್ಕೆ ಮಾರಕ. ಸದನಕ್ಕೆ ಸಭಾಪತಿ ಆಗಮಿಸದಂತೆ ತಡೆಯೊಡ್ಡಿದ್ದು ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪರಿಷತ್ ಸಭಾಪತಿ ಇರುವಾಗ ಪೀಠದಲ್ಲಿ ಉಪ ಸಭಾಪತಿ ಆಸೀನರಾಗುವಂತಿಲ್ಲ. ಅವರಿಗೆ ಸಮಸ್ಯೆ ಇದ್ದಾಗ ಅಥವಾ ಸಭಾಪತಿ ಸೂಚನೆ ಮೇರೆಗೆ ಉಪಸಭಾಪತಿ ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸಬೇಕು. ಆದರೆ, ಮಂಗಳವಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಉಪ ಸಭಾಪತಿಯೇ ಪೀಠದಲ್ಲಿ ಕುಳಿತಿದ್ದರು.‌ ಇದು ಕಲಾಪ ನಿಯಮಾವಳಿಗೆ ವಿರುದ್ಧ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

ರಾಜ್ಯಪಾಲರ ನಡೆ ನೋಡಿ ಮುಂದಿನ ತೀರ್ಮಾನ 

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಪರಿಷತ್ ಗದ್ದಲಕ್ಕೆ ಸಂಬಂಧಿಸಿ ರಾಜ್ಯಪಾಲರು ಕೈಗೊಳ್ಳುವ ತೀರ್ಮಾನವನ್ನು ನೋಡಿಕೊಂಡು ಕಾಂಗ್ರೆಸ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ದೂರಿದರು.