ನೈತಿಕತೆ ಇದ್ದರೆ ಸಭಾಪತಿ ರಾಜೀನಾಮೆ ನೀಡಬೇಕಿತ್ತು : ಸಿಎಂ ಯಡಿಯೂರಪ್ಪ

16-12-20 10:50 am       Bangalore Correspondent   ಕರ್ನಾಟಕ

ಸಭಾಪತಿ ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುತ್ತೇವೆಂದು ಮೊದಲೇ ಪ್ರಕಟಿಸಿದ್ದೆವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು, ಡಿ.15 : ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸದಸ್ಯರು ಬೆಂಬಲಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುತ್ತೇವೆಂದು ಮೊದಲೇ ಪ್ರಕಟಿಸಿದ್ದೆವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಉಪ ಸಭಾಪತಿ ಅವರೇ ಮುಂದುವರಿಯುತ್ತಾರೆ. ‘ಬೆಲ್' ಚಾಲನೆಯಲ್ಲಿರುವ ವೇಳೆ ಪೀಠಕ್ಕೆ ಬಂದರು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕಿತ್ತು. ಘಟನೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯೇ ನೇರ ಕಾರಣ 

ವಿಧಾನ ಪರಿಷತ್ತಿನಲ್ಲಿ ನಡೆದ ಜಟಾಪಟಿಗೆ ಬಿಜೆಪಿಯೇ ನೇರ ಕಾರಣ. ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ತಯಾರಾಗಿತ್ತು. ಆದರೆ, ನಿಯಮಾವಳಿಯನ್ವಯ ಕಲಾಪ ನಡೆಸಬೇಕೆಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ.

ಬಿಜೆಪಿ ಸದಸ್ಯರು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಭಾಪತಿ ಪೀಠದ ಮುಂದೆ ರಂಪಾಟ ಮಾಡಿದರು. 2009ರಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ವಿಧಾನಸಭೆಯಲ್ಲಿ ಕಲಾಪ ನಡೆಸಲು ಬಿಡದೇ ಬಿಜೆಪಿ ಪ್ರಜಾಪ್ರಭುತ್ವವನ್ನು ಅಣಕಿಸಿತ್ತು. ಈಗಲೂ ವಿಧಾನ ಪರಿಷತ್‍ನಲ್ಲಿ ಗದ್ದಲ ಎಬ್ಬಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿ ಅವಮಾನ ಮಾಡಿದೆ ಎಂದು ದೂರಿದರು. 

ಪರಿಷತ್ತಿನ ಕಲಾಪದಲ್ಲಿ ಈ ರೀತಿಯ ಅಹಿತಕರ ಘಟನೆ ನಡೆಯಬಾರದಿತ್ತು. ಸದನಕ್ಕೆ ಅಗೌರವ ಸೂಚಿಸಿದ ಇಂತಹ ಘಟನೆ ಯಾವತ್ತು ಆಗಿರಲಿಲ್ಲ. ಉಪ ಸಭಾಪತಿಯವರು ಸಭಾಪತಿ ಸೂಚನೆ ಬಳಿಕ ಪೀಠದಲ್ಲಿ ಕೂರಬೇಕು. ಆದರೆ, ಅವರ ಸೂಚನೆ ಇಲ್ಲದೆಯೆ ಸಭಾಪತಿ ಪೀಠದಲ್ಲಿ ಕೂತಿದ್ದು ತಪ್ಪು ಎಂದು ಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.