ಕಾಸರಗೋಡು ; ನಗರಸಭೆ ಯುಡಿಎಫ್ ತೆಕ್ಕೆಗೆ, ವರ್ಕಾಡಿ, ಮೀಂಜ ಬಿಜೆಪಿ ನಿರ್ಣಾಯಕ !!

16-12-20 02:51 pm       Headline Karnataka News Network   ಕರ್ನಾಟಕ

ಕೇರಳ ರಾಜ್ಯಾದ್ಯಂತ ಸ್ಥಳೀಯಾಡಳಿತಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಮತ್ತೆ ಅಧಿಕಾರ ಹಿಡಿದಿದೆ.

ಕಾಸರಗೋಡು, ಡಿ.16: ಕೇರಳ ರಾಜ್ಯಾದ್ಯಂತ ಸ್ಥಳೀಯಾಡಳಿತಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಮಧ್ಯಾಹ್ನ ವರೆಗಿನ ಫಲಿತಾಂಶದಲ್ಲಿ ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಮತ್ತೆ ಅಧಿಕಾರ ಹಿಡಿದಿದೆ. ಯುಡಿಎಫ್ 21, ಬಿಜೆಪಿ 14 ಹಾಗೂ ಎಲ್ ಡಿಎಫ್ ಒಂದು ಸ್ಥಾನಗಳನ್ನು ಪಡೆದಿದೆ. ಪಕ್ಷೇತರರು ಎರಡು ಸ್ಥಾನ ಗಳಿಸಿದ್ದಾರೆ.

ವರ್ಕಾಡಿ ಬಿಜೆಪಿ 5, ಎಲ್ ಡಿಎಫ್ 6

ಇನ್ನು ವರ್ಕಾಡಿ ಪಂಚಾಯತ್ ನಲ್ಲಿ ಎಲ್ ಡಿಎಪ್ – 6, ಯುಡಿಎಫ್ – 4, ಬಿಜೆಪಿ 5 ಸ್ಥಾನಗಳನ್ನು ಪಡೆದಿದೆ. ಎಸ್ ಡಿಪಿಐ ಒಂದು ಸ್ಥಾನವನ್ನು ಪಡೆದಿದೆ. ಬಿಜೆಪಿ ವರ್ಕಾಡಿ ಪಂಚಾಯತ್ ನಲ್ಲಿ ಇದೇ ಮೊದಲಿಗೆ ಐದು ಸ್ಥಾನಗಳನ್ನು ಗಳಿಸಿದೆ. ಯಾವುದೇ ಪಕ್ಷ ಅಧಿಕಾರ ಪಡೆಯಲು ಬಿಜೆಪಿ ನಿರ್ಣಾಯಕ ಎನಿಸಿದೆ. ಕೊಣಿಬೈಲು ವಾರ್ಡಿನಲ್ಲಿ ಮಮತಾ, ವರ್ಕಾಡಿ ಗೀತಾ ಭಾಸ್ಕರ್, ಕೊಡ್ಲಮೊಗರಿನಲ್ಲಿ ಆಶಾ, ಬೊಡ್ಡೋಡಿ ಪದ್ಮಾವತಿ ಹಾಗೂ ಅರಿಬೈಲು ವಾರ್ಡಿನಲ್ಲಿ ರಾಜ್ ಕುಮಾರ್ ಶೆಟ್ಟಿ ಗೆಲುವು ಕಂಡಿದ್ದಾರೆ. ಅರಿಬೈಲು ವಾರ್ಡಿನಲ್ಲಿ ನಿಕಟ ಪೈಪೋಟಿಯಿದ್ದು ಬಿಜೆಪಿ ಅಭ್ಯರ್ಥಿ 33 ಮತಗಳಿಂದ ಗೆದ್ದಿದ್ದಾರೆ. ರಾಜ್ ಕುಮಾರ್ 457, ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಪುರುಷೋತ್ತಮ 424, ಕಾಂಗ್ರೆಸ್ ಅಭ್ಯರ್ಥಿ ಶರೀಫ್ 338 ಮತಗಳನ್ನು ಪಡೆದಿದ್ದಾರೆ.

ಮೀಂಜದಲ್ಲಿ ಆರು ಬಿಜೆಪಿ, ಎಲ್ ಡಿಎಫ್ 4

ಮೀಂಜ ಪಂಚಾಯತಿನಲ್ಲಿ ಬಿಜೆಪಿ 6, ಎಲ್ ಡಿಎಫ್ 4, ಯುಡಿಎಫ್ 3 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೀಂಜದಲ್ಲೂ ದೊಡ್ಡ ಪಕ್ಷವಾಗಿ ಮೂಡಿಬಂದಿರುವ ಬಿಜೆಪಿಗೆ ಅಧಿಕಾರ ಪಡೆಯಲು ಎಲ್ ಡಿಎಫ್ ಅಥವಾ ಯುಡಿಎಫ್ ನೆರವು ಪಡೆಯಬೇಕಿದೆ.

ಮಂಜೇಶ್ವರ ಪಂಚಾಯತ್ ನಲ್ಲಿ ಯುಡಿಎಫ್ ಎಂಟು ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 6 ಸ್ಥಾನಗಳನ್ನು ಗೆದ್ದಿದೆ. ಎಲ್ ಡಿಎಫ್ 3, ಎಸ್ ಡಿಪಿಐ 2, ಐಎನ್ ಡಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಪಜ್ವ ಗೆಲುವು ಕಂಡಿದ್ದಾರೆಂದು ಮೂಲಗಳು ತಿಳಿಸಿವೆ.