ಸಾರಿಗೆ ಮುಷ್ಕರಕ್ಕಿಳಿದ ನೌಕರರಿಗೆ ಶಾಕ್ ; 200 ಮಂದಿಗೆ ಅಮಾನತು ಶಿಕ್ಷೆ

19-12-20 12:03 pm       Bangalore Correspondent   ಕರ್ನಾಟಕ

ಮುಷ್ಕರಕ್ಕೆ ಕಾರಣಕರ್ತರು ಎನ್ನಲಾದ ನಾಲ್ಕು ನಿಗಮಗಳ ಸುಮಾರು 200 ರಷ್ಟು ನೌಕರರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು, ಡಿ.19: ತಮ್ಮ ಬೇಡಿಕೆಗಳನ್ನು ಮುಂದಿಟ್ಟು ನಾಲ್ಕು ದಿನಗಳ ಪರ್ಯಂತ ಮುಷ್ಕರ ನಡೆಸಿದ ಸಾರಿಗೆ ನೌಕರರಿಗೆ ಮತ್ತೊಂದು ಶಾಕ್‌ ತಗುಲಿದೆ. ಮುಷ್ಕರಕ್ಕೆ ಕಾರಣಕರ್ತರು ಎನ್ನಲಾದ ನಾಲ್ಕು ನಿಗಮಗಳ ಸುಮಾರು 200 ರಷ್ಟು ನೌಕರರನ್ನು ಅಮಾನತುಗೊಳಿಸಲಾಗಿದೆ. ಸರ್ಕಾರದ ಈ ನಡೆಗೆ ನೌಕರರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ಆರನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಮುಷ್ಕರ ನಡೆಸಿದ್ದರು. 

ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ನಡೆದ ಮುಷ್ಕರದಿಂದಾಗಿ ಸಾರಿಗೆ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ನೌಕರರ 10 ಬೇಡಿಕೆಗಳ ಪೈಕಿ ಪ್ರಮುಖ ಬೇಡಿಕೆಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಸರ್ಕಾರ ಅಸ್ತು ಎಂದಿತ್ತು. ಆದರೆ ಇದೀಗ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರ ಪೈಕಿ 200 ಮಂದಿಗೆ ಅಮಾನತು ಶಿಕ್ಷೆ ನೀಡಲಾಗಿದೆ ಎಂಬ ಆರೋಪ ನೌಕರರ ಕಡೆಯಿಂದ ಕೇಳಿಬರುತ್ತಿದೆ.

ಸರ್ಕಾರದ ಈ ನಡೆಯಿಂದ ನೌಕರರು ಆಕ್ರೋಶಗೊಂಡಿದ್ದಾರೆ. ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ಭಾರೀ ಗಮನ ಸೆಳೆದಿತ್ತು. ನಾಲ್ಕು ದಿನಗಳ ದಿಢೀರ್ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗಿತ್ತು. ಅಲ್ಲದೆ, ಸಾರಿಗೆ ನೌಕರರ ಸಂಘದ ಮುಖಂಡರು, ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.