ಜನವರಿ ಒಂದರಿಂದಲೇ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್

19-12-20 03:48 pm       Headline Karnataka News Network   ಕರ್ನಾಟಕ

ಜನವರಿ 1ರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಆರಂಭಿಸಲು ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದೆ.

ಬೆಂಗಳೂರು, ಡಿ.19: ಕೊನೆಗೂ ಶಾಲೆ ಆರಂಭಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಜನವರಿ 1ರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಆರಂಭಿಸಲು ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪ್ರಮುಖ ಸಚಿವರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಶಾಲೆ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದಾಗಿ ಪ್ರಕಟಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕೊರೊನಾ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ಈ ಬಗ್ಗೆ ವರದಿ ನೀಡಿತ್ತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಕೊರೊನಾ ಸೋಂಕಿನ ಪ್ರಮಾಣ ತಗ್ಗಿರುವ ಕಾರಣ ಜನವರಿ ಒಂದರಿಂದಲೇ 10 ಮತ್ತು 12ನೇ ತರಗತಿಗಳನ್ನು ಆರಂಭಿಸಲು ಸಲಹೆ ಮಾಡಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಅದಕ್ಕೆ ಒಪ್ಪಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.

15 ದಿನಗಳ ನಂತರ 9ನೇ ತರಗತಿ ಮತ್ತು ಮೊದಲ ಪಿಯು ತರಗತಿಗಳನ್ನು ಆರಂಭಿಸಲು ಕೂಡ ಸಲಹಾ ಮಂಡಳಿ ವರದಿಯಲ್ಲಿ ಹೇಳಿದ್ದರು. ಆ ಬಗ್ಗೆ ಮುಖ್ಯಮಂತ್ರಿ ಈಗಲೇ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಕೊರೊನಾ ಲಾಕ್ಡೌನ್ ಬಳಿಕ ಕಳೆದ 9 ತಿಂಗಳಿಂದ ಶಾಲೆ ಸ್ಥಗಿತಗೊಂಡಿತ್ತು. ಈ ನಡುವೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆದಿತ್ತು. ಅದು ಬಿಟ್ಟರೆ ಶಾಲೆ ಸಂಪೂರ್ಣವಾಗಿ ಸ್ಥಗಿತಗೊಂಡು ವಿದ್ಯಾರ್ಥಿಗಳಿಗೂ ಶಿಕ್ಷಣದ ಬಗ್ಗೆ ಆಸಕ್ತಿಯನ್ನೇ ಕಳಕೊಂಡಿದ್ದರು. ಇದೀಗ ಮತ್ತೆ ಶಾಲೆ ಆರಂಭಿಸುವುದರೊಂದಿಗೆ ಕೊರೊನಾ ಬಳಿಕ ವಿದ್ಯಾರ್ಥಿಗಳು ಮತ್ತೆ ಶಾಲೆಯ ಹಾದಿ ಹಿಡಿಯಲಿದ್ದಾರೆ. ಹಾಗಿದ್ದರೂ, ಶಾಲೆಗೆ ಆಗಮಿಸುವುದನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಸೂಚನೆಯನ್ನೂ ಶಿಕ್ಷಣ ಇಲಾಖೆ ಶಾಲಾಡಳಿತ ಮಂಡಳಿಗಳಿಗೆ ನೀಡಿದೆ.