ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇರಿ ಕರ್ನಾಟಕದ ನಾಲ್ವರು ನ್ಯಾಯಮೂರ್ತಿಗಳ ದಿಢೀರ್ ವರ್ಗಾವಣೆ 

21-04-25 07:10 pm       Bangalore Correspondent   ಕರ್ನಾಟಕ

ನಾಲ್ವರು ಹಿರಿಯ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯದ ಒಟ್ಟು ಏಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು, ಎ.21 : ನಾಲ್ವರು ಹಿರಿಯ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯದ ಒಟ್ಟು ಏಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗೆ ನ್ಯಾಯಮೂರ್ತಿಗಳ ಬಗ್ಗೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ದೀರ್ಘ ಕಾಲ ಒಂದೇ ಕಡೆ ಇದ್ದ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ. 

ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ವರ್ಗಾವಣೆ ಆದೇಶ ಹೊರಡಿಸಿದೆ. ಹೈಕೋರ್ಟ್‌ ಆಡಳಿತದ ಗುಣಮಟ್ಟವನ್ನು ಬಲಪಡಿಸುವ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಧ್ಯಕ್ಷತೆಯಲ್ಲಿ ಏಪ್ರಿಲ್ 15 ಮತ್ತು 19 ರಂದು ನಡೆದ ಸಭೆಗಳಲ್ಲಿ ನ್ಯಾಯಾಲಯಗಳ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಲಾಗಿತ್ತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿಕೆ ಪ್ರಕಾರ, ಹೈಕೋರ್ಟ್‌ ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಬಲಪಡಿಸುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿದ್ಯಂತೆ. 

ಕರ್ನಾಟಕ ಹೈಕೋರ್ಟ್‌ನಲ್ಲಿದ್ದ ನ್ಯಾಯಾಧೀಶ ಹೇಮಂತ್ ಚಂದನ ಗೌಡರ್​​ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ನ್ಯಾ.ಕೃಷ್ಣನ್ ನಟರಾಜನ್ ಕರ್ನಾಟಕ ಹೈಕೋರ್ಟ್‌ನಿಂದ ಕೇರಳ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. 

ನ್ಯಾ.ಎನ್​​.ಶ್ರೀನಿವಾಸ ಸಂಜಯ್ ಗೌಡ ಅವರನ್ನು ಕರ್ನಾಟಕ ಹೈಕೋರ್ಟ್‌ನಿಂದ ಗುಜರಾತ್ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿದೆ. ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ಕರ್ನಾಟಕ ಹೈಕೋರ್ಟ್‌ನಿಂದ ಒಡಿಶಾ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. 

ತೆಲಂಗಾಣ ಹೈಕೋರ್ಟ್‌ನಲ್ಲಿದ್ದ ನ್ಯಾ‌.ಪೆರುಗು ಶ್ರೀಸುಧಾ ಅವರನ್ನು  ಕರ್ನಾಟಕ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿದೆ. ನ್ಯಾ.ಕೆ.ಸುರೇಂದರ್ ಅವರನ್ನು ತೆಲಂಗಾಣ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. 

ನ್ಯಾಯಾಧೀಶ ಡಾ.ಕೆ.ಮನ್ಮಧ ರಾವ್ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ.

The Supreme Court Collegium has recommended the transfer of four Karnataka High Court judges to other High Courts. The judges who have been recommended for transfer are Justices Krishna Dixit, K Natarajan, Hemant Chandangoudar and Sanjay Gowda.