R Ashok, Census Probe: ಜಾತಿಗಣತಿ ವರದಿಯೇ ನಕಲಿ, 165 ಕೋಟಿ ಖರ್ಚಾದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ; ಆರ್.ಅಶೋಕ್ ಆಗ್ರಹ 

21-04-25 07:27 pm       Bangalore Correspondent   ಕರ್ನಾಟಕ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಜಾತಿಗಣತಿ ವರದಿಯ ಮೂಲಪ್ರತಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರ ಈಗ ಮಂಡಿಸುತ್ತಿರುವ ಜಾತಿ ಗಣತಿ ವರದಿಯೇ ನಕಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು, ಎ.21: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಜಾತಿಗಣತಿ ವರದಿಯ ಮೂಲಪ್ರತಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರ ಈಗ ಮಂಡಿಸುತ್ತಿರುವ ಜಾತಿ ಗಣತಿ ವರದಿಯೇ ನಕಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ ದತ್ತಾಂಶಗಳ ವರದಿ ನಕಲಿ ಎಂಬುದಕ್ಕೆ ಪುರಾವೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು 5-10-2021ರಂದು ಸರ್ಕಾರಕ್ಕೆ ಬರದಿದ್ದ ಪತ್ರದ ಪ್ರಕಾರ ಮೂಲ ಅಥವಾ ಹಸ್ತಪ್ರತಿಯೇ ಇಲ್ಲ. ಸೀಲ್ಡ್ ಪೆಟ್ಟಿಗೆಯನ್ನು ಮಹಜರು ಮಾಡಿ ಅಧ್ಯಕ್ಷ, ಸದಸ್ಯರ ಸಮಕ್ಷಮ ತೆರೆದಾಗ ಸೀಲ್ಡ್ ಪೆಟ್ಟಿಗೆಯಲ್ಲಿಟ್ಟಿದ್ದ ಪ್ರತಿಯ ಮೇಲೆ ಸದಸ್ಯ ಕಾರ್ಯದರ್ಶಿ ಸಹಿಯೇ ಇರಲಿಲ್ಲವೆಂಬುದನ್ನು ತಿಳಿಸಿದ್ದಾರೆಂದು ಹೇಳಿದರು.

ಸರ್ಕಾರ ಈಗ ಹೇಳಲಿ. ಈ ಜಾತಿಗಣತಿ ವರದಿ ಅಸಲಿಯೇ? ಮೂಲ ವರದಿಯ ಹಸ್ತಪ್ರತಿಯೇ ಸೀಲ್ಡ್ ಪೆಟ್ಟಿಗೆಯಲ್ಲಿ ಇಲ್ಲ ಎಂದ ಮೇಲೆ ವರದಿ ಹೇಗೆ ವರ್ಜಿನಲ್‌ ಆಗುತ್ತದೆ? ಇದು ರಕ್ತ ಕಣ್ಣೀರು ಸಿನಿಮಾ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಹೊರಗೆ ತಂದಿದ್ದಾರೆ. ಅವರು ಯಾವಾಗ ಬೇಕೋ ಆಗ ವರದಿ ನೀಡುತ್ತಾರೆ. ಇದಕ್ಕೆ ತಮ್ಮೊಂದಿಗೆ ನಾಟಕ ಕಂಪನಿಯನ್ನು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು. 

ಆಯೋಗದ ಅಧ್ಯಕ್ಷರೇ ವರದಿಯ ಮೂಲಪ್ರತಿ ಇಲ್ಲ ಎಂದಿದ್ದಾರೆ. ಅವರು ಸಮೀಕ್ಷೆ ಮಾಡಿದ್ದು 6 ಕೋಟಿ ಜನರನ್ನು. ಉಳಿದ ಒಂದು ಕೋಟಿ ಜನರಿಗೆ ನಾಮವೇ? ಎಂದು ಪ್ರಶ್ನಿಸಿದ ಅವರು, ಜಾತಿಗಣತಿಯ ವರ್ಜಿನಲ್‌ ಪ್ರತಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಈಗ ಮಂಡಿಸಿರುವ ವರದಿ ನಕಲಿ ಎಂದು ಆರೋಪಿಸಿದರು.

ಸಮೀಕ್ಷೆ ನಡೆಸಿದ ಮೂಲ ವರದಿ ಪ್ರತಿ ಕಾಣೆಯಾಗಿದ್ದರ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು. ಸಮೀಕ್ಷೆಯ ದಾಖಲೆಗಳು, 165 ಕೋಟಿ ರೂ. ಖರ್ಚು ಮಾಡಿದ್ದು ಹೇಗೆಂಬುದು? ಈ ತನಿಖೆಯ ವ್ಯಾಪ್ತಿಗೆ ತರಬೇಕು. ನಕಲಿ ವರದಿಯನ್ನೇ ಹಲವು ಸಚಿವರು ವೈಜ್ಞಾನಿಕ, ನಿಖರವೆಂದು ಹೇಳಿರುವುದು ಹಾಸ್ಯಾಸ್ಪದವೆಂದು ವ್ಯಂಗ್ಯವಾಡಿದರು.

Terming the present caste census report as “fake” since the original copy is reportedly missing, Leader of Opposition in the Assembly R. Ashok on Sunday demanded a judicial probe into the episode of the original copy missing from the Karnataka State Commission for Backward Classes.