Terror Attack, Bharat Bhushan wife: "ಸಣ್ಣ ಮಗು ಇದೆ, ಬಿಟ್ಟುಬಿಡಿ ಅಂತ ಕೈ ಮುಗಿದರೂ ಉಗ್ರರು ಕೇಳಲಿಲ್ಲ.. ನೀವು ಇಲ್ಲಿ ಇಷ್ಟು ಖುಷಿಯಿಂದ ಇದ್ದೀರಿ. ನಮ್ಮ ಮಕ್ಕಳು ಸಾಯುತ್ತಿದ್ದಾರೆ ಎಂದು ಹೇಳಿ ಪತಿಗೆ ಗುಂಡಿಕ್ಕಿದರು..!" 

24-04-25 06:39 pm       Bangalore Correspondent   ಕರ್ನಾಟಕ

ಸಣ್ಣ ಮಗು ಇದೆ, ಬಿಟ್ಟುಬಿಡಿ ಅಂತ ಕೈ ಮುಗಿದರೂ ಉಗ್ರರು ಕೇಳಲಿಲ್ಲ. ನನ್ನ ಪತಿಯ ತಲೆಗೆ ಗುರಿಯಿಟ್ಟು ಶೂಟ್‌ ಮಾಡಿದರು. ನೀವು ಇಲ್ಲಿ ಇಷ್ಟು ಖುಷಿಯಿಂದ ಇದ್ದೀರಿ. ನಮ್ಮವರು ಸಾಯುತ್ತಿದ್ದಾರೆ ಎಂದು ಹೇಳುತ್ತ ಉಗ್ರರು ಗುಂಡು ಹಾರಿಸುತ್ತಿದ್ದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್‌ ಭೂಷಣ್‌ ಪತ್ನಿ  ಡಾ.ಸುಜಾತ ಗದ್ಗದಿತ ಮಾತುಗಳನ್ನು ಕೇಳಿದರೆ ಕರುಳು ಚುರುಕ್ ಎನ್ನುತ್ತದೆ. 

ಬೆಂಗಳೂರು, ಎ.24 : ಸಣ್ಣ ಮಗು ಇದೆ, ಬಿಟ್ಟುಬಿಡಿ ಅಂತ ಕೈ ಮುಗಿದರೂ ಉಗ್ರರು ಕೇಳಲಿಲ್ಲ. ನನ್ನ ಪತಿಯ ತಲೆಗೆ ಗುರಿಯಿಟ್ಟು ಶೂಟ್‌ ಮಾಡಿದರು. ನೀವು ಇಲ್ಲಿ ಇಷ್ಟು ಖುಷಿಯಿಂದ ಇದ್ದೀರಿ. ನಮ್ಮವರು ಸಾಯುತ್ತಿದ್ದಾರೆ ಎಂದು ಹೇಳುತ್ತ ಉಗ್ರರು ಗುಂಡು ಹಾರಿಸುತ್ತಿದ್ದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್‌ ಭೂಷಣ್‌ ಪತ್ನಿ  ಡಾ.ಸುಜಾತ ಗದ್ಗದಿತ ಮಾತುಗಳನ್ನು ಕೇಳಿದರೆ ಕರುಳು ಚುರುಕ್ ಎನ್ನುತ್ತದೆ. 

ಬೆಂಗಳೂರಿನ ಭರತ್‌ ಭೂಷಣ್‌ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಶವವನ್ನು ಮತ್ತೀಕೆರೆಯ ಉದ್ಯಾನಕ್ಕೆ ತರಲಾಯಿತು. ಮನೆಗೆ ಬಂದ ಬಳಿಕ ಸುಜಾತ ಅವರು, ಉಗ್ರರ ಕರಾಳ ಮುಖವನ್ನು ಹೇಳುತ್ತ ಬಿಕ್ಕಿಬಿಕ್ಕಿ ಅತ್ತರು.

ಏ.18ಕ್ಕೆ ನಾವು ಕಾಶ್ಮೀರಕ್ಕೆ ಹೋಗಿದ್ದೆವು. ಏ.22ರಂದು ಪ್ರವಾಸ ಮುಗಿಸಿ ಹಿಂತಿರುಗಬೇಕಿತ್ತು. ಅಂದು ನಾವು ಪಹಲ್ಗಾಮ್ ತೆರಳಿದ್ದೆವು. ಪಹಲ್ಗಾಮ್ ಬಳಿಯ ಬೈಸಾರನ್‌ ಹುಲ್ಲುಗಾವಲು ಪ್ರದೇಶವನ್ನು ಮಿನಿ ಸ್ವಿಜ್ಜರ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ನಾವು ಮತ್ತು ಇನ್ನೊಂದು ಕುಟುಂಬದವರು ಜೊತೆಯಾಗಿ ಓಡಾಡುತ್ತಿದ್ದೆವು. ಫೋಟೋ ಎಲ್ಲಾ ತೆಗೆದು ಮಧ್ಯಾಹ್ನವಾಗಿತ್ತು. ಊಟ ಮಾಡಲು ಮತ್ತೆ ಕೆಳಗೆ ಹೋಗಬೇಕು ಎನ್ನುವಾಗಲೇ ಜೋರಾಗಿ ಗುಂಡಿನ ಶಬ್ಧ ಕೇಳಿಸಿತ್ತು. 

ಪ್ರಾಣಿ, ಪಕ್ಷಿ ಓಡಿಸಲು ಗನ್‌ ಶೂಟ್‌ ಮಾಡುತ್ತಿರಬಹುದು ಎಂದು ಭಾವಿಸಿದೆವು. ಶಬ್ಧದ ತೀವ್ರತೆ ಜಾಸ್ತಿ ಆಗುತ್ತಿದ್ದಂತೆ ಹತ್ತಿರದಲ್ಲೇ ಏನೋ ದಾಳಿಯಾಗುತ್ತಿದೆ ಎಂದರಿತು ನಾವು ಮಗುವಿನೊಂದಿಗೆ ಟೆಂಟ್‌ ಹಿಂಭಾಗದಲ್ಲಿ ಅಡಗಿ ಕುಳಿತೆವು. ಅಲ್ಲಿಯೇ 100 ಅಡಿ ದೂರದಲ್ಲಿ ಉಗ್ರ ಇನ್ನೊಬ್ಬರನ್ನು ಮಾತನಾಡಿಸಿ ತಲೆಗೆ ಶೂಟ್‌ ಮಾಡಿದ. ನಂತರ ಒಬ್ಬರು ಹಿರಿಯರನ್ನು ಹಿಂದಿಯಲ್ಲಿ ಮಾತನಾಡಿಸಿ, “ನೀವು ಹೇಗೆ ಖುಷಿಯಲ್ಲಿ ಇದ್ದೀರಿ. ಅಲ್ಲಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ. ಇಲ್ಲಿ ನೀವು ಮಕ್ಕಳೊಂದಿಗೆ ಹೇಗೆ ಆಟ ಆಡುತ್ತಾ ಖುಷಿಯಾಗಿದ್ದೀರಿ” ಎಂದು ಪ್ರಶ್ನಿಸಿದ. ಅದಕ್ಕೆ ಅವರು,”ನಾನು ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು” ಎಂದು ಕೇಳಿದರು. ಅವರ ಮಾತನ್ನು ಕೇಳದೇ ತಲೆಗೆ ಶೂಟ್‌ ಮಾಡಿ ಒದ್ದು ಹಾಕಿದ. ನೆಲಕ್ಕುರುಳಿದ ನಂತರವೂ ಮತ್ತೆ ಮೂರು-ನಾಲ್ಕು ಬಾರಿ ಗುಂಡು ಹಾರಿಸಿದ.

ನಮ್ಮ ಟೆಂಟ್‌ ಬಳಿ ಬಂದಾಗ ಮಗುವನ್ನು ಬಚ್ಚಿಟ್ಟುಕೊಂಡೆ. ಸಣ್ಣ ಮಗು ಇದೆ ಬಿಟ್ಟುಬಿಡಿ ಎಂದು ಕೈ ಮುಗಿದೆ. ನಮ್ಮನ್ನು ಏನು ಮಾಡಬೇಡಿ ಎಂದು ಬೇಡಿಕೊಂಡೆ. ಉಗ್ರರು ನನ್ನ ಪತಿಯನ್ನು ಪ್ರಶ್ನೆ ಮಾಡಿ ಭರತ್ ಭೂಷಣ್‌ ಮೇಲೆ ಶೂಟ್‌ ಮಾಡಿ ಹೋದ. ಉಗ್ರರು ಪತಿಯ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ನಾನು ತಲೆ ಎತ್ತಲೇ ಇಲ್ಲ. ಮಗುವನ್ನು ಬಚ್ಚಿಟ್ಟುಕೊಂಡಿದ್ದೆ. ನನಗೆ ಬೇಕಾದರೆ ಗುಂಡು ಹೊಡೆಯಲಿ ಮಗುವಿಗೆ ಏನು ಆಗದೇ ಇರಲಿ ಎಂದುಕೊಂಡಿದ್ದೆ. ಪತಿಯ ತಲೆಗೆ ಗುಂಡು ಹಾರಿಸಿದ್ದನ್ನು ನೋಡಿ ವೈದ್ಯೆಯಾಗಿದ್ದರಿಂದ ಭೂಷಣ್‌ ಇನ್ನು ಬದುಕುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ನನ್ನ ಮೂರು ವರ್ಷದ ಮಗುವನ್ನು ಉಳಿಸಲು ನಾನು ಅಲ್ಲಿಂದ ಓಡಿಕೊಂಡು ಬಂದೆ. ಉಗ್ರರು ಆ ಕಡೆಗೆ ಹೋಗುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಲು ಮುಂದಾದರು. ನಾನು ಮಗುವನ್ನು ಎತ್ತಿಕೊಂಡು ಓಡಲು ಆರಂಭಿಸಿದೆ. 

ಇತ್ತ ಓಡಿ ಬರುವಾಗ ಅಲ್ಲಿ ಹೆಣಗಳ ರಾಶಿಯೇ ಬಿದ್ದಿತ್ತು. ಮತ್ತೆ ಅಟ್ಟಿಸಿಕೊಂಡು ಬಂದು ದಾಳಿ ಮಾಡಬಹುದು ಎಂಬ ಭಯದಿಂದ ನಾನು ಮಗುವನ್ನು ಎತ್ತಿಕೊಂಡು ಓಡತೊಡಗಿದೆ. ಈ ವೇಳೆ ಹಲವು ಮಂದಿ ಓಡಿ ಬರುತ್ತಿದ್ದರು. ಕೊನೆಗೆ ಇತ್ತ ಕಡೆ ಬರುವ ಕುದುರೆ ಸಿಕ್ಕಿತು. ಕುದುರೆಯಲ್ಲಿ ಕುಳಿತು ಸಿಆರ್‌ಪಿಎಫ್‌ ಮೆಸ್‌ಗೆ ತಲುಪಿದೆ ಎಂದು ಹೇಳಿ ಬಿಕ್ಕಿದರು. 

ಹೋಗುವಾಗ ಪಹಲ್ಗಾವ್‌ನಿಂದ 3-4 ಕಿ.ಮೀ ದೂರದ ಬೈಸಾರನ್ ಗೆ ಕುದುರೆಯಲ್ಲಿ ಹೋಗಿದ್ದೆವು. ಆ ಬಯಲು ಪ್ರದೇಶದಲ್ಲಿ ಕುಳಿತು ಮಗುವಿನ ಜೊತೆ ಆಟ ಆಡುತ್ತಾ ಕುಳಿತಿದ್ದೆವು. ಮೈದಾನದಲ್ಲಿ ಇದ್ದ ಟೆಂಟ್‌ನಲ್ಲಿ ಕಾಶ್ಮೀರದ ದಿರಿಸು ಧರಿಸಿ ಫೋಟೋ ತೆಗೆಯಬಹುದಿತ್ತು. ಹಾಗಾಗಿ ಅಲ್ಲಿ ಫೋಟೊ ಎಲ್ಲ ತೆಗೆದು ಹಿಂತಿರುಗಲು ರೆಡಿಯಾಗಿದ್ದೆವು. ಆಗಲೇ ಉಗ್ರರು ಬಂದಿದ್ದರು ಎಂದು ಹೇಳಿ ಭಾವುಕರಾದರು.

Bharat Bhushan, 35, begged for his life... not for himself, but for his three-year-old child. But, amid the bloodshed in Pahalgam, appeals to the terrorist with an automatic weapon were ignored and Bharat Bhushan was shot in the head, one of 26 killed in Tuesday's attack.