ಲೋಕಾಯುಕ್ತ ರದ್ದುಪಡಿಸಿ ಸಿದ್ದರಾಮಯ್ಯ ಜೈಲು ತಪ್ಪಿಸಿಕೊಂಡರು ; ವಿಶ್ವನಾಥ್ ಆರೋಪ

19-12-20 04:43 pm       Bangalore Correspondent   ಕರ್ನಾಟಕ

ಅರ್ಕಾವತಿ ಭೂ ಹಗರಣದ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು ಎಂದು ಎಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ.

ಬೆಂಗಳೂರು, ಡಿ.19; ಲೋಕಾಯುಕ್ತ ಸಂಸ್ಥೆಯನ್ನು ರದ್ದು ಮಾಡುವ ಮೂಲಕ ಸಿದ್ದರಾಮಯ್ಯ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಭೂ ಹಗರಣದ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನು ನಿರ್ಜೀವಗೊಳಿಸಿದರು. ಅದರ ಬದಲಿಗೆ, ಎಸಿಬಿ ಎಂಬ ಹೊಸ ವಿಭಾಗವನ್ನು ಆರಂಭಿಸಿ, ತಾವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರು. ಒಂದು ವೇಳೆ, ಅರ್ಕಾವತಿ ಹಗರಣ ಮತ್ತೆ ತೆರೆದುಕೊಂಡಲ್ಲಿ ಸಿದ್ದರಾಮಯ್ಯ ಎಲ್ಲಿ ಇರಬೇಕಾದೀತು ಎನ್ನುವುದನ್ನು ಊಹಿಸಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯನ್ನು ಬಿಟ್ಟು ಓಡಿಹೋಗಿದ್ರು. ಅಲ್ಲಿ ಯಾಕೆ ಸೋಲಾಯ್ತು ಅನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ. ನೀವು ಸ್ವತಃ ಕಾಂಗ್ರೆಸ್ ಪಕ್ಷವನ್ನು ಡೆಮಾಲಿಶ್ ಮಾಡಿದ್ರಿ. ಆದರೆ, ಕಾಂಗ್ರೆಸನ್ನು ಕಾಪಾಡಿದ್ದು ದಲಿತ ಸಮುದಾಯ. ನೀವು ವಿಮರ್ಶೆ ಮಾಡಿಕೊಳ್ಳದೆ ಮಾತನಾಡಬೇಡಿ. ಚಾಮುಂಡೇಶ್ವರಿಯಲ್ಲಿ ಸೋಲಿನ ಸುಳಿವು ಸಿಕ್ಕಿದ್ದರಿಂದಲೇ ನೀವು ಬಾದಾಮಿಗೆ ಓಡಿದ್ರಿ. ಯಾಕೆ ನಿಮ್ಮ ಯೋಜನೆಗಳು ಚಾಮುಂಡೇಶ್ವರಿಯಲ್ಲಿ ಫಲ ನೀಡಲಿಲ್ಲ. ನೀವು ಯಾರೋ ಚಮಚಾಗಳನ್ನು ನಂಬಿ ಸೋತಿರಿ.

ನಿಮ್ಮನ್ನು ಜೆಡಿಎಸ್, ಕಾಂಗ್ರೆಸ್ ನಾಯಕರು ಸೋಲಿಸಿದ್ದಲ್ಲ. ನಿಮ್ಮನ್ನು ಸೋಲಿಸಿದ್ದು ಅಲ್ಲಿನ ಜನರು. ಹಿಂದೆ ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದಾಗ, ಇದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ ವಿಶ್ವನಾಥ್, ಸದ್ಯಕ್ಕೆ ಕುಮಾರಸ್ವಾಮಿ ಸರಕಾರವನ್ನು ತಾವೇ ಬೀಳಿಸಿದ್ದು ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ನಮ್ಮ ಮೇಲೆ ಇದ್ದ ಅಪವಾದದಿಂದ ಮುಕ್ತವಾಗಿದ್ದೇವೆ. ಇದಕ್ಕಾಗಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಅಭಿನಂದಿಸುತ್ತೇನೆ ಎಂದರು.

ಸಿದ್ದರಾಮಯ್ಯರಿಗೆ ಇರುವಷ್ಟು ಹೊಟ್ಟೆಕಿಚ್ಚು ಬೇರೆ ಯಾರಿಗೂ ಇರಲಿಕ್ಕಿಲ್ಲ. ಸಿದ್ದರಾಮಯ್ಯ ಸೋಮನಹಳ್ಳಿಯ ಮುದುಕಿಯಂತಾಗಿದ್ದಾರೆ. ತಮ್ಮ ಕೋಳಿ ಕೂಗಿದರೆ ಮಾತ್ರ ಬೆಳಗಾಗೋದು ಅಂದ್ಕೊಂಡಿದ್ದಾರೆ. ಸುತ್ತ ಗಿರಕಿ ಹೊಡೆಯುವ ಮಂದಿಯೂ ಅದನ್ನೇ ಕಿವಿಗೆ ಊದುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಮೋಸ ಹೋಗುತ್ತಿದ್ದಾರೆ ಎಂದು ಕಟಕಿಯಾಡಿದ್ದಾರೆ.