NIA Bangalore, Pahalgam Terror, Bharat Bhushan: ಪಹಲ್ಗಾಮ್‌ ಉಗ್ರರ ದಾಳಿ ; ಭರತ್ ಭೂಷಣ್ ಮನೆಗೆ NIA ಭೇಟಿ, ಪತ್ನಿಯಿಂದ ಇಂಚಿಂಚೂ ಮಾಹಿತಿ ಪಡೆದ ಅಧಿಕಾರಿಗಳು

28-04-25 01:41 pm       Bangalore Correspondent   ಕರ್ನಾಟಕ

ಜಮ್ಮು - ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಿ (ಎನ್ಐಎ) ಈಗಾಗಲೇ ಆರಂಭಿಸಿದೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಅವರ ಪತ್ನಿಯಿಂದ ಎನ್ಐಎ ಅಧಿಕಾರಿಗಳ ತಂಡ ಮಾಹಿತಿ ಪಡೆದುಕೊಂಡಿದೆ.

ಬೆಂಗಳೂರು, ಏ 28 : ಜಮ್ಮು - ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಿ (ಎನ್ಐಎ) ಈಗಾಗಲೇ ಆರಂಭಿಸಿದೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಅವರ ಪತ್ನಿಯಿಂದ ಎನ್ಐಎ ಅಧಿಕಾರಿಗಳ ತಂಡ ಮಾಹಿತಿ ಪಡೆದುಕೊಂಡಿದೆ.

ಮತ್ತಿಕೆರೆಯ ಸುಂದರ್ ನಗರದಲ್ಲಿರುವ ಭರತ್ ಭೂಷಣ್ ನಿವಾಸಕ್ಕೆ ಭೇಟಿ ನೀಡಿದ್ದ ಎನ್ಐಎ ಅಧಿಕಾರಿಗಳ ತಂಡ, ಭರತ್ ಭೂಷಣ್ ಅವರ ಪತ್ನಿ ಸುಜಾತರಿಂದ ಘಟನಾ ದಿನದ ಮಾಹಿತಿ ಪಡೆದುಕೊಂಡಿದೆ. ದಾಳಿ ನಡೆದ ಸಂದರ್ಭದಲ್ಲಿನ ಘಟನಾವಳಿಗಳು, ಕೃತ್ಯಕ್ಕೆ ಮುನ್ನ ಉಗ್ರರು ಏನು ಮಾತನಾಡಿದರು, ಅವರ ಮುಖಚಹರೆ ಮತ್ತಿತರ ವಿವರಗಳನ್ನ ಎನ್ಐಎ ಅಧಿಕಾರಿಗಳು ಕಲೆಹಾಕಿದ್ದಾರೆ.

ಸುಮಾರು 12 ಗಂಟೆಗಳ ಕಾಲ ಭರತ್ ಭೂಷಣ್ ಅವರ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರಿಂದ ಎನ್‌ಐಎ ಅಧಿಕಾರಿಗಳು ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಸುಜಾತ ಅವರ ಬಳಿ ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕಾಶ್ಮೀರ ಪ್ರವಾಸದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವತ್ತು ನೀವು ಕಾಶ್ಮೀರಕ್ಕೆ ಹೋಗಿದ್ದು?, ಯಾವ ಟ್ರಾವೆಲ್ಸ್ ಮೂಲಕ ಹೋದ್ರಿ?, ಕಾಶ್ಮೀರದಲ್ಲಿ ಎಲ್ಲಿ ಉಳಿದುಕೊಂಡಿದ್ರಿ?, ಪೆಹಲಾಮ್‌ಗೆ ಯಾವತ್ತೂ ಹೋದ್ರಿ?, ಎಷ್ಟೋತ್ತಿಗೆ ಹೋದ್ರಿ? ಎನ್ನುವಂತೆ ಹಲವು ಪ್ರಶ್ನೆಗಳು ಕೇಳಲಾಯಿತು ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಉಗ್ರರು ದಾಳಿ ಮಾಡಿದ ಸಮಯ, ಎಷ್ಟು ಜನ ಇದ್ದರು, ಅವರು ಯಾವ ಭಾಷೆಯಲ್ಲಿ ಮಾತನಾಡಿದರು ಎಂಬ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಭರತ್ ಭೂಷಣ್ ಬಳಿ ಏನಾದ್ರೂ ಮಾತನಾಡಿದ್ರಾ?, ನಿಮ್ಮ ಬಳಿ ಏನ್ ಮಾತನಾಡಿದ್ರು?. ಅವರ ಮುಖದ ಚಹರೆ ನೆನಪು ಇದೆಯಾ?, ಮುಖ ಯಾವ ರೀತಿ ಇತ್ತು, ಮುಖದ ಮೇಲೆ ಯಾವುದಾದರೂ ಮಾರ್ಕ್ ಇತ್ತಾ? ಎಂಬ ಪ್ರಶ್ನೆಗಳ ಕೇಳಿದ್ದಾರೆ ಎನ್ನಲಾಗ್ತಿದೆ.

ಇದರ ಜೊತೆಗೆ ಸುಮಾರು 14ಕ್ಕೂ ಹೆಚ್ಚು ಶಂಕಿತರ ಫೋಟೋಗಳನ್ನು ತೋರಿಸಿದ ಅಧಿಕಾರಿಗಳು, ಇದರಲ್ಲಿ ಯಾರಾದ್ರೂ ಇದ್ರಾ? ಎಂದು ಕೇಳಿದರು. ಭರತ್ ಪತ್ನಿಯ ಹೇಳಿಕೆ ಆಧರಿಸಿ ಎನ್‌ಐಎ ಕೆಲ ರೇಖಾಚಿತ್ರಗಳನ್ನು ಬಿಡಿಸಿದ್ದು, ಈ ರೇಖಾಚಿತ್ರಗಳನ್ನು ತೋರಿಸಿಕೊಂಡು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಏಪ್ರಿಲ್ 22ರಂದು ಜಮ್ಮು - ಕಾಶ್ಮೀರದ ಬೈಸರನ್ ಕಣಿವೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನ ಅಮಾಯಕರು ಸಾವನ್ನಪ್ಪಿದರೆ, 20 ಜನ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನ ಎನ್ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಅಧಿಕಾರಿಗಳ ತಂಡ ಉಗ್ರ ಕೃತ್ಯ ನಡೆದ ಸ್ಥಳ, ಉಗ್ರರ ಪ್ರವೇಶ ಮತ್ತು ನಿರ್ಗಮನದ ಕುರುಹುಗಳ ಕುರಿತು ಈಗಾಗಲೇ ಪರಿಶೀಲನೆ ಆರಂಭಿಸಿದೆ.

Pahalgam Terror Attack, NIA Visits Bharat Bhushan's House, Officials Gather Detailed Information from Wife in Bangalore.