ಪರಿಷತ್ ಗದ್ದಲ ; ಉಪ ಸಭಾಪತಿ, ಡಿಸಿಎಂ, ಮಾಧುಸ್ವಾಮಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

20-12-20 12:38 pm       Bangalore Correspondent   ಕರ್ನಾಟಕ

ವಿಧಾನ ಪರಿಷತ್ತಿನಲ್ಲಿ ನಡೆದ ಗದ್ದಲ, ಅಸಂಸದೀಯ ಚಟುವಟಿಕೆ ನಡೆಸಿದ ಉಪ ಸಭಾಪತಿ ಧರ್ಮೇಗೌಡ, ಅದಕ್ಕೆ ಪ್ರೇರಣೆ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ, ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್, ಸಭಾಪತಿಗೆ ಪತ್ರ ಬರೆದು ಆಗ್ರಹಿಸಿದೆ.

ಬೆಂಗಳೂರು, ಡಿ.20: ವಿಧಾನ ಪರಿಷತ್ತಿನಲ್ಲಿ ನಡೆದ ಗದ್ದಲ, ಅಸಂಸದೀಯ ಚಟುವಟಿಕೆ ನಡೆಸಿದ ಉಪ ಸಭಾಪತಿ ಧರ್ಮೇಗೌಡ, ಅದಕ್ಕೆ ಪ್ರೇರಣೆ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ, ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್, ಸಭಾಪತಿಗೆ ಪತ್ರ ಬರೆದು ಆಗ್ರಹಿಸಿದೆ.

ಡಿ.15ರಂದು ನಡೆದ ಅಹಿತಕರ ಘಟನೆಗಳಿಗೆ ಬಿಜೆಪಿಯೇ ಕಾರಣ, ಅದಕ್ಕೆ ಕಾರಣವಾದ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಷತ್ತಿನ ಸದಸ್ಯ ಪಿ.ಆರ್ ರಮೇಶ್ ಪತ್ರ ಬರೆದಿದ್ದಾರೆ.

ಸಭಾಪತಿಯನ್ನು ಸದನದೊಳಗೆ ಪ್ರವೇಶ ಮಾಡದಂತೆ ಕಾನೂನು ಕೈಗೆತ್ತಿಕೊಂಡಿದ್ದ ಬಿಜೆಪಿ ಸದಸ್ಯರಾದ ವೈ.ಎ.ನಾರಾಯಣ ಸ್ವಾಮಿ, ಅರುಣ್ ಶಹಾಪುರ, ಪ್ರಾಣೇಶ್ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅಲ್ಲದೆ, ಸಭಾಪತಿ ಪೀಠದ ಬಳಿ ಗುಂಪುಕೂಡಿ ಬಲಪ್ರಯೋಗ ಮಾಡಿದ ಬಿಜೆಪಿಯ ಆಯನೂರು ಮಂಜುನಾಥ್, ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಸುನಿಲ್ ವಲ್ಯಾಪುರೆ, ಜೆಡಿಎಸ್ ನ ಗೋವಿಂದೇಗೌಡ, ರಮೇಶ್ ಗೌಡ, ಶ್ರೀಕಂಠೇಗೌಡ ಕಾನೂನು ವ್ಯಾಪ್ತಿ ಮೀರಿ ವರ್ತಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಒತ್ತಾಯಿಸಿದ್ದಾರೆ.