Dinesh Gundu Rao, Suhas Shetty Murder: ಸುಹಾಸ್ ಶೆಟ್ಟಿ ಕೊಲೆ‌‌ ಕೃತ್ಯ ಭೀಭತ್ಸ ; ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ, ಉಸ್ತುವಾರಿ ಸಚಿವ ಗುಂಡೂರಾವ್ 

02-05-25 10:52 am       Bangalore Correspondent   ಕರ್ನಾಟಕ

ಮಂಗಳೂರಿನ ಬಜಪೆಯಲ್ಲಿ‌ ನಡೆದ ಸುಹಾಸ್ ಶೆಟ್ಟಿ ಕೊಲೆ‌‌ ಕೃತ್ಯ ಅತ್ಯಂತ ಭೀಭತ್ಸ ಮತ್ತು ಆಘಾತಕಾರಿ.‌ ಈ ಘಟನೆಯಿಂದ ವೈಯಕ್ತಿಕವಾಗಿ ನಾನು ವಿಚಲಿತನಾಗಿದ್ದೇನೆ. ಮೇಲ್ನೋಟಕ್ಕೆ ‌ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಮಾಡುವಂತಿದೆ.

ಬೆಂಗಳೂರು, ಮೇ 2 : ಮಂಗಳೂರಿನ ಬಜಪೆಯಲ್ಲಿ‌ ನಡೆದ ಸುಹಾಸ್ ಶೆಟ್ಟಿ ಕೊಲೆ‌‌ ಕೃತ್ಯ ಅತ್ಯಂತ ಭೀಭತ್ಸ ಮತ್ತು ಆಘಾತಕಾರಿ.‌ ಈ ಘಟನೆಯಿಂದ ವೈಯಕ್ತಿಕವಾಗಿ ನಾನು ವಿಚಲಿತನಾಗಿದ್ದೇನೆ. ಮೇಲ್ನೋಟಕ್ಕೆ ‌ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಮಾಡುವಂತಿದೆ. ಹಾಗಾಗಿ ಈ ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು  ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರ ಓಲೈಕೆಯೂ ಇಲ್ಲ. ಯಾರ ತುಷ್ಟೀಕರಣವೂ ಇಲ್ಲ. ಈಗಾಗಲೇ ಈ ಕೃತ್ಯದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹತ್ಯೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ‌ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ.  

ಬಿಜೆಪಿಯವರು ಈಗಾಗಲೇ ಸುಹಾಸ್ ಪ್ರಕರಣವನ್ನು ರಾಜಕೀಯ ‌ಮಾಡಲು ಹೊರಟಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಒಂದು ಮಾತು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಕೂಡ ಇದೆ. ದ್ವೇಷ ಹರಡುವ ಮೂಲಕ‌, ಪ್ರಚೋದಿಸುವ ಮೂಲಕ‌ ಮಂಗಳೂರಿನಲ್ಲಿ ಶಾಂತಿ ಭಂಗ‌ ಮಾಡುವ ದುಷ್ಟ ಕೆಲಸಕ್ಕೆ ಕೈ ಹಾಕಬೇಡಿ‌. ಜವಾಬ್ದಾರಿಯಿಂದ ವರ್ತಿಸಿ. 

ಕೊಲೆಯಾದ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ನಾವು‌ ಕೇವಲ ಬಾಯಿ‌ ಮಾತಿನಲ್ಲಿ ಕಠಿಣ ಕ್ರಮದ ಭರವಸೆ ನೀಡುವವರಲ್ಲ. ಬದಲಿಗೆ ಕಾನೂನಿನ ಅನುಸಾರ ಈ ಕೃತ್ಯ ಎಸಗಿದವರಿಗೆ ತಕ್ಕ‌‌ ಪಾಠ ಕಲಿಸುವವರು. ಇದು ನಿಶ್ಚಿತ. ಅಂತಿಮವಾಗಿ ಭೀಕರ ಕೃತ್ಯದಲ್ಲಿ‌ ಜೀವ ಕಳೆದುಕೊಂಡ ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಬೇಡುತ್ತೇನೆ. ಸುಹಾಸ್ ಅಗಲಿಕೆಯ ನೋವಿನಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ನನ್ನ ಕಡೆಯಿಂದ ಮನಃಪೂರ್ವಕ ಸಾಂತ್ವನಗಳು ಎಂದು ದಿನೇಶ್ ಗುಂಡೂರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Incharge Minister Dinesh Gundu Rao has assured that swift and decisive action will be taken against those responsible for the murder of Suhas Shetty. Speaking to the media, Rao emphasized that the government is committed to ensuring justice and will not tolerate criminal activities that threaten public safety.