Alok Kumar IPS, DGP, Phone Tapping: ರಫ್ ಅಂಡ್ ಟಫ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಹಗೆ ಸಾಧಿಸ್ತಿದ್ಯಾ ಸರ್ಕಾರ ? ಆರು ವರ್ಷ ಹಳೆ ಪ್ರಕರಣ ಕೆದಕಿ ಇಲಾಖಾ ವಿಚಾರಣೆಗೆ ಆದೇಶ,‌ ಡಿಜಿಪಿ ಸ್ಥಾನಕ್ಕೆ ಮುಂಬಡ್ತಿಗೆ ತೊಡಕು 

22-05-25 07:36 pm       Bangalore Correspondent   ಕರ್ನಾಟಕ

ರಫ್ ಅಂಡ್ ಟಫ್ ಐಪಿಎಸ್ ಅಧಿಕಾರಿಯೆಂದು ಹೆಸರು ಮಾಡಿರುವ ಅಲೋಕ್ ಕುಮಾರ್ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಹಗೆ ಸಾಧಿಸ್ತಿದ್ಯಾ ಎನ್ನುವ ಅನುಮಾನ ಮೂಡಿದೆ. 1994ನೇ ಬ್ಯಾಚ್ ಅಧಿಕಾರಿ ಅಲೋಕ್ ಕುಮಾರ್ ಸದ್ಯಕ್ಕೆ ರಾಜ್ಯ ಪೊಲೀಸ್‌ ಇಲಾಖೆಯ ತರಬೇತಿ ವಿಭಾಗದಲ್ಲಿ ಎಡಿಜಿಪಿ ಆಗಿದ್ದಾರೆ. ಒಂದು ಡಿಜಿಪಿ ಸ್ಥಾನ ಖಾಲಿಯಾಗಿದ್ದು ಮುಂಬಡ್ತಿಯಾಗಲು ಅರ್ಹತೆ ಪಡೆದಿರುವಾಗಲೇ ಅಲೋಕ್ ಕುಮಾರ್ ವಿರುದ್ಧ ಆರು ವರ್ಷ ಹಳೆಯ ಕೇಸೊಂದನ್ನು ಕೆದಕಿ ಹಾಕಿದೆ.

ಬೆಂಗಳೂರು, ಮೇ 22 : ರಫ್ ಅಂಡ್ ಟಫ್ ಐಪಿಎಸ್ ಅಧಿಕಾರಿಯೆಂದು ಹೆಸರು ಮಾಡಿರುವ ಅಲೋಕ್ ಕುಮಾರ್ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಹಗೆ ಸಾಧಿಸ್ತಿದ್ಯಾ ಎನ್ನುವ ಅನುಮಾನ ಮೂಡಿದೆ. 1994ನೇ ಬ್ಯಾಚ್ ಅಧಿಕಾರಿ ಅಲೋಕ್ ಕುಮಾರ್ ಸದ್ಯಕ್ಕೆ ರಾಜ್ಯ ಪೊಲೀಸ್‌ ಇಲಾಖೆಯ ತರಬೇತಿ ವಿಭಾಗದಲ್ಲಿ ಎಡಿಜಿಪಿ ಆಗಿದ್ದಾರೆ. ಒಂದು ಡಿಜಿಪಿ ಸ್ಥಾನ ಖಾಲಿಯಾಗಿದ್ದು ಮುಂಬಡ್ತಿಯಾಗಲು ಅರ್ಹತೆ ಪಡೆದಿರುವಾಗಲೇ ಅಲೋಕ್ ಕುಮಾರ್ ವಿರುದ್ಧ ಆರು ವರ್ಷ ಹಳೆಯ ಕೇಸೊಂದನ್ನು ಕೆದಕಿ ಹಾಕಿದೆ.

2019ರಲ್ಲಿ ಕೇಳಿ ಬಂದಿದ್ದ ಫೋನ್‌ ಟ್ಯಾಪಿಂಗ್‌ ಹಾಗೂ ಅಕ್ರಮವಾಗಿ ಪ್ರಮುಖರ ಮೊಬೈಲ್‌ ಕರೆ ವಿವರ(ಸಿಡಿಆರ್‌) ಪಡೆದ ಪ್ರಕರಣದಲ್ಲಿ ಅಲೋಕ್‌ ಕುಮಾರ್‌ ವಿರುದ್ಧ ರಾಜ್ಯ ಸರ್ಕಾರ ಸದ್ದಿಲ್ಲದೆ, ಇಲಾಖಾ ತನಿಖೆಗೆ ಆದೇಶ ನೀಡಿದೆ ಎನ್ನಲಾಗುತ್ತಿದೆ. ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ ಹಳೆಯ ಪ್ರಕರಣವನ್ನು ಕೆದಕ್ಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರದ ಈ ನಡೆಗೆ ಹಿರಿಯ ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 

ಎಂ.ಎ. ಸಲೀಂ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆ ಒಂದು ಡಿಜಿಪಿ ಸ್ಥಾನ ತೆರವಾಗಿತ್ತು. 1994ನೇ ಬ್ಯಾಚ್‌ನವರಾದ ಅಲೋಕ್‌ ಕುಮಾರ್‌ ಅವರಿಗೆ ಈ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಇದೇ ಸಮಯದಲ್ಲಿ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದ್ದು  ಮುಂಬಡ್ತಿ ನೀಡಲಾಗದ ತಾಂತ್ರಿಕ ಇಕ್ಕಟ್ಟಿನ ಸ್ಥಿತಿಯನ್ನು ಮುಂದಿಡಲಾಗಿದೆ. ಇದರಿಂದಾಗಿ ಅದೇ ಬ್ಯಾಚ್‌ನ ಮತ್ತೊಬ್ಬ ಹಿರಿಯ ಅಧಿಕಾರಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ. ಫೋನ್‌ ಟ್ಯಾಪಿಂಗ್‌, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್‌ ಪಡೆದ ಆರೋಪದಲ್ಲಿ ಕಾಂಗ್ರೆಸ್ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ ಎನ್ನುವುದು ಖಚಿತ ಮೂಲಗಳಿಂದ ತಿಳಿದುಬಂದಿದೆ. ‌

ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್‌ ಕುಮಾರ್‌ ಬೆಂಗಳೂರು ಸಿಸಿಬಿ ಮುಖ್ಯಸ್ಥ ಹುದ್ದೆಯಲ್ಲಿದ್ದರು. 2019 ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುವುದಕ್ಕಾಗಿ ಕಾಂಗ್ರೆಸ್​-ಜೆಡಿಎಸ್​ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿತ್ತು. ಇದೇ ವೇಳೆ ಕುಮಾರಸ್ವಾಮಿ ಸರ್ಕಾರ ಕೆಲವು ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್‌ ಟ್ಯಾಪಿಂಗ್‌ ಮತ್ತು ಸಿಡಿಆರ್‌ ಸಂಗ್ರಹಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದೇ ಸಮಯದಲ್ಲೇ ಅಲೋಕ್‌ ಕುಮಾರ್‌ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್‌ ಆಯುಕ್ತರನ್ನಾಗಿ ಸಿಎಂ ಕುಮಾರಸ್ವಾಮಿ ನೇಮಿಸಿದ್ದರು. ಆಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್‌ ಕುಮಾರ್‌ ಮನೆಗೂ ದಾಳಿ ನಡೆಸಿತ್ತು. ಈ ವೇಳೆ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್‌ ಟ್ಯಾಪಿಂಗ್‌ ಮಾಡಿದ್ದ ಆಡಿಯೋ ಕೂಡ ವೈರಲ್‌ ಮಾಡಲಾಗಿತ್ತು. ಆನಂತರ, ತನ್ನ ಮೇಲಿನ ಪ್ರಕರಣಕ್ಕೆ ಕೆಎಟಿ ಮೂಲಕ ತಡೆಯಾಜ್ಞೆ ತಂದಿದ್ದರೆ, ಭಾಸ್ಕರ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Karnataka Govt Orders Departmental Inquiry Against IPS Alok Kumar Over Phone Tapping Allegations, Will He Still Make Cut for DGP Post.