ಎಸ್ಸೆಸ್ಸೆಲ್ಸಿ,ಪಿಯುಸಿ ಆರಂಭ ಖಚಿತ ; ಪರೀಕ್ಷೆ ವಿಳಂಬಕ್ಕೆ ನಿರ್ಧಾರ

23-12-20 12:47 pm       Headline Karnataka News Network   ಕರ್ನಾಟಕ

ಶಾಲೆ ಆರಂಭಿಸುವ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು, ಡಿ. 23 :ರಾಜ್ಯದಲ್ಲಿ ಕೊರೊನಾ ಆತಂಕ ಕಳೆದು, ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿರುವಾಗಲೇ ರೂಪಾಂತರಿ ಕೊರೊನಾ ವೈರಸ್ ಕಾಟ ಮತ್ತೆ ಆತಂಕ ಸೃಷ್ಟಿಸಿದೆ. ಆದರೆ ಶಾಲೆ ಆರಂಭಿಸುವ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಇದೀಗ 2021ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿಗಳನ್ನು ಜ.1 ರಿಂದ ನಡೆಸಲು ತಯಾರಿ ನಡೆಸಲಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಹಾಗೂ ಲಭ್ಯವಾಗುವ ಸೀಮಿತ ಅವಧಿಯ ಹಿನ್ನೆಲೆಯಲ್ಲಿ, ಮಾರ್ಚ್ ವೇಳೆಗೆ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದು ಕಷ್ಟ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್. ಸುರೇಶ್ ಕುಮಾರ್, ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮವನ್ನು ಅಂತಿಮ ಗೊಳಿಸಲಾಗುತ್ತದೆ. ಕನಿಷ್ಟ ಕಲಿಕೆಗೆ ಒತ್ತು ನೀಡಲಾಗುತ್ತದೆ. ಅಲ್ಲದೇ, ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಕಲಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ‌ ಎಂದು ಅವರು ಹೇಳಿದ್ದಾರೆ.

ವಿಶೇಷವಾಗಿ ಗ್ರಾಮೀಣ ಭಾಗಗಳ ಮಕ್ಕಳ ಹಿತದೃಷ್ಟಿಯಿಂದ ಆರಂಭಿಸಲಾದ ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಸಹ ಅಳವಡಿಸಿಕೊಳ್ಳಬೇಕೆಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಕ್ತ ನಿಲುವನ್ನು ಹೊಂದಿದೆ. ಜೊತೆಗೆ ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳೂ ಅಳವಡಿಸಿಕೊಳ್ಳಲಿ ಎಂದಿದ್ದಾರೆ.

ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಆರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಆದರೆ ವಿದ್ಯಾಗಮದ ಮೂಲಕ ತರಗತಿಗಳು ನಡೆದರೂ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್‌ ತಿಂಗಳಿನಲ್ಲಿ ನಡೆಸುವುದಿಲ್ಲ. ಮಕ್ಕಳಿಗೆ ಸರಿಯಾದ ತರಗತಿಯ ಬಳಿಕವೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ಆ ಮೂಲಕ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಬಹುದೊಡ್ಡ ಗೊಂದಲವನ್ನು ಶಿಕ್ಷಣ ಸಚಿವರು ಪರಿಹರಿಸಿದ್ದಾರೆ.