ನಾಪತ್ತೆ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ; ಪೊಲೀಸ್ ಅಧಿಕಾರಿಗೆ ಕಸ ಗುಡಿಸುವ ಶಿಕ್ಷೆ !!

24-12-20 01:05 pm       Headline Karnataka News Network   ಕರ್ನಾಟಕ

ನಿರ್ಲಕ್ಷ್ಯ ತೋರಿದ ಆರೋಪಕ್ಕೀಡಾಗಿದ್ದ ಕಲಬುರಗಿ ಸ್ಟೇಷನ್ ಬಜಾರ್ ಠಾಣಾಧಿಕಾರಿಗೆ ಕಲಬುರಗಿ ಹೈಕೋರ್ಟ್ ಕಸ ಗುಡಿಸುವ ಶಿಕ್ಷೆ ವಿಧಿಸಿದೆ.

ಕಲಬುರಗಿ, ಡಿ.24 : ತನ್ನ ಮಗ ಕಾಣೆಯಾಗಿದ್ದಾನೆಂದು ಮಹಿಳೆಯೊಬ್ಬರು ನೀಡಿದ ದೂರನ್ನು ಪರಿಗಣಿಸದೆ, ನಿರ್ಲಕ್ಷ್ಯ ತೋರಿದ ಆರೋಪಕ್ಕೀಡಾಗಿದ್ದ ಕಲಬುರಗಿ ಸ್ಟೇಷನ್ ಬಜಾರ್ ಠಾಣಾಧಿಕಾರಿಗೆ ಕಲಬುರಗಿ ಹೈಕೋರ್ಟ್ ಕಸ ಗುಡಿಸುವ ಶಿಕ್ಷೆ ವಿಧಿಸಿದೆ.

ಕಲಬುರಗಿ ತಾಲುಕಿನ ಮಿಣಜಗಿ ತಾಂಡಾದ ಕೂಲಿ ಕಾರ್ಮಿಕ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ ಕಲಬುರಗಿ ಪೀಠ ಈ ಆದೇಶ ನೀಡಿದೆ. ಮಹಿಳೆ ತನ್ನ ಮಗ ಸುರೇಶ್ ಕಾಣೆಯಾಗಿದ್ದಾನೆ ಎಂದು ದೂರು ನೀಡಿದರೂ ಠಾಣಾಧಿಕಾರಿ ಅದನ್ನು ಗಂಭೀರವಾಗಿ ಪರಿಗಣಿಸದೆ ಕರ್ತವ್ಯ ಲೋಪ ಎಸಗಿದ್ದರು.  ಹಾಗಾಗಿ ಠಾಣಾಧಿಕಾರಿ ಒಂದು ವಾರ ಠಾಣೆಯ ಮುಂಭಾಗದ ರಸ್ತೆಯನ್ನು ಸ್ವಚ್ಛಗೊಳಿಸಬೇಕು ಎಂದು ನ್ಯಾಯಪೀಠ ಅಪರೂಪದ ಶಿಕ್ಷೆ ನೀಡಿದೆ.

ಅರ್ಜಿದಾರರ ಪುತ್ರ ಸುರೇಶ್ ನಾಪತ್ತೆಯಾದ ಸಂದರ್ಭದಲ್ಲಿ ಠಾಣೆಯ ಅಧಿಕಾರಿಗಳ ಕಾರ್ಯವೈಖರಿ ತುಂಬಾ ಆಘಾತಕಾರಿಯಾಗಿದೆ. ಠಾಣೆಯ ಪೊಲೀಸ್ ಅಧಿಕಾರಿ, ಅಪರಾಧ ಪ್ರಕರಣದ ನಿಯಮಗಳನ್ನು ಪಾಲಿಸದೇ ಇರುವುದು ಕಾಣುತ್ತಿದೆ. ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಮುಂದಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. 

ದೂರುದಾರ ತಾರಾಬಾಯಿ ಠಾಣೆಗೆ ಬಂದಿದ್ದಾಗಿ ಹೇಳುತ್ತಾರೆ. ಹೀಗಿದ್ದಾಗ ಅಧಿಕಾರಿ ಠಾಣೆಯ ಡೈರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಬಳಿಕ ಎಫ್‍ಐಆರ್ ದಾಖಲಿಸಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದಿರುವುದು ಠಾಣಾಧಿಕಾರಿಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದಿದೆ ಕೋರ್ಟ್.