ಶಾಲೆ ಆರಂಭಕ್ಕೆ ಸಿದ್ಧತೆ ; ಎಸ್ಸೆಸ್ಸೆಲ್ಸಿ, ವಿದ್ಯಾಗಮದ ವೇಳಾಪಟ್ಟಿ ಬಿಡುಗಡೆ 

24-12-20 06:29 pm       Headline Karnataka News Network   ಕರ್ನಾಟಕ

ಶಿಕ್ಷಣ ಇಲಾಖೆ ಎಸೆಸೆಲ್ಸಿ ಮತ್ತು 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಗಮದ ವೇಳಾಪಟ್ಟಿಯನ್ನು ನಿಗದಿಗೊಳಿಸಿ ಬಿಡುಗಡೆ ಮಾಡಿದೆ.

ಬೆಂಗಳೂರು, ಡಿ.24: ರಾಜ್ಯಾದ್ಯಂತ ಜ.1ರಿಂದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಿರುವಾಗಲೇ ಶಿಕ್ಷಣ ಇಲಾಖೆ ಎಸೆಸೆಲ್ಸಿ ಮತ್ತು 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಗಮದ ವೇಳಾಪಟ್ಟಿಯನ್ನು ನಿಗದಿಗೊಳಿಸಿ ಬಿಡುಗಡೆ ಮಾಡಿದೆ.

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ (ಕನ್ನಡ), ದ್ವಿತೀಯ ಭಾಷೆ (ಇಂಗ್ಲೀಷ್), ತೃತೀಯ ಭಾಷೆ(ಹಿಂದಿ), ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂ ಇತರ(ಚಿತ್ರಕಲೆ/ವೃತ್ತಿ) ಸೇರಿ 8 ತಂಡ ಮಾಡಿ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಬೆಳಗ್ಗೆ 10ರಿಂದ 10.45ರ ತನಕ ಒಂದು ಅವಧಿ, 10.45ರಿಂದ 11.30ರ ವರೆಗೆ ಎರಡನೇ ಅವಧಿ ಹಾಗೂ 11.45ರಿಂದ 12.30ರ ವರೆಗೆ ಮೂರನೇ ಅವಧಿ ಇರಲಿದೆ.

ವಿದ್ಯಾಗಮ ವೇಳಾಪಟ್ಟಿ :

ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ, ವಾಚನಾಲಯ, ಪ್ರಯೋಗಾಲಯ ಹಾಗೂ ವರಾಂಡ ಸ್ಥಳಗಳನ್ನು ಬಳಸಿಕೊಳ್ಳಲು ಸೂಚನೆ. ಎಲ್ಲ ಕೋವಿಡ್ ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ತಿಳಿಸಿದ್ದು, ದೈಹಿಕ ಅಂತರ, ಮಾಸ್ಕ್ , ಸ್ಯಾನಿಟೈಸರ್ ಬಳಸಬೇಕು. ಅಲ್ಲದೆ, ಒಂದು ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಮಾತ್ರ ಆಸೀನರಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ವಿದ್ಯಾಗಮ ತರಗತಿಯು 8 ತಂಡಗಳಲ್ಲಿ ನಡೆಯಲಿದೆ. ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ 9ನೇ ತರಗತಿ, ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ 8ನೇ ತರಗತಿಗಳ ವಿದ್ಯಾಗಮ ಪಾಠ ನಡೆಯಲಿದೆ. ಕೆಲವು ಶಾಲೆಗಳಲ್ಲಿ 8ನೇ ತರಗತಿಯ ವರೆಗೆ ಮಾತ್ರ ಇದ್ದು, ಅಲ್ಲಿ ಬುಧವಾರವೂ 8ನೇ ತರಗತಿ ನಡೆಯಲಿದೆ. 

6ನೇ ತರಗತಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ, 7ನೇ ತರಗತಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ತರಗತಿಗಳು ನಡೆಯಲಿದೆ. ಇದು ಕೂಡ 45 ನಿಮಿಷಗಳ ಮೂರು ಅವಧಿಯಲ್ಲಿ ಇರಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ವಿದ್ಯಾಗಮ ತರಗತಿ ಇರಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.