ನೈಟ್ ಕರ್ಫ್ಯೂ ಐಡಿಯಾ ಕೊಟ್ಟವರ ಫೋಟೊ ಬೇಕಿತ್ತು, ಮನೆಯಲ್ಲಿಟ್ಕೋತೀನಿ...!!

25-12-20 02:43 pm       Headline Karnataka News Network   ಕರ್ನಾಟಕ

ಕೋವಿಡ್‌ ನಿಯಂತ್ರಣ ಮಾಡಲು ನೈಟ್‌ ಕರ್ಪ್ಯೂ ಐಡಿಯಾವನ್ನು ಸರ್ಕಾರಕ್ಕೆ ಕೊಟ್ಟವರ ಫೋಟೋ ಕೊಟ್ಟರೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ.

ಬೆಂಗಳೂರು, ಡಿ.25: ಕೋವಿಡ್‌ ನಿಯಂತ್ರಣ ಮಾಡಲು ನೈಟ್‌ ಕರ್ಪ್ಯೂ ಐಡಿಯಾವನ್ನು ಸರ್ಕಾರಕ್ಕೆ ಕೊಟ್ಟವರ ಫೋಟೋ ಕೊಟ್ಟರೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್‌ ಬಗ್ಗೆ ಚಿಂತೆ ಇಲ್ಲ. ಆದರೆ ಬಿಎಸ್‌ ಯಡಿಯೂರಪ್ಪ ಏಕೆ ಇಷ್ಟೊಂದು ವೀಕ್ ಆಗಿದ್ದಾರೋ ಅನಿಸತ್ತೆ.. ಇವರಿಗೆ ಸಲಹೆ ನೀಡುವವರಿಗಿಂತ ರಾಜ್ಯದ ಜನರು ಹೆಚ್ಚು ಬುದ್ಧಿವಂತರಿದ್ದಾರೆ.. ಹಗಲು ಕೊರೊನಾ ಬರಲ್ಲ. ರಾತ್ರಿ ಕೊರೊನಾ ಬರುತ್ತದೆ ಎಂದಿದ್ದು ಯಾರೆನ್ನುವುದು ಬೇಕಿತ್ತು. ಬೆಂಗಳೂರು ಇಡೀ ಪ್ರಪಂಚದಲ್ಲಿ ಹೆಸರು ಮಾಡಿದೆ. ಇಂಥ ಜಾಗದಲ್ಲಿ ಕುಳಿತು ಪ್ರಪಂಚದ ಜನ ನಗುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 

ಯಾರ ಹತ್ತಿರವೂ ಚರ್ಚಿಸದೆ ನೈಟ್‌ ಕರ್ಫ್ಯೂಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸಾಮಾನ್ಯ ಜ್ಞಾನ ಬೇಕು, ಅದು ಇಲ್ಲದವರು ಕೈಗೊಂಡಿರುವ ನಿರ್ಧಾರ ಇದು. ಇಡೀ ದೇಶದ ಜನ, ಪ್ರಪಂಚದ ಜನ ನೋಡುತ್ತಾರೆಂಬ ಜ್ಞಾನ ಇರಬೇಕು. ಇದು ಬರೀಯ ಸುಧಾಕರ್, ಯಡಿಯೂರಪ್ಪ ಅಂತಲ್ಲ. ರಾಜ್ಯದ ಜನರ ಪ್ರಶ್ನೆ. ಒಂದು ವರ್ಷ ಲಾಕ್ಡೌನ್, ಕರ್ಫ್ಯೂ ಮಾಡಿ, ಎಲ್ಲ ತಲೆಕೆಳಗಾಗಿದೆ ಎಂದು ಮೂದಲಿಸಿದರು.