ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ ; ಅಭಿಮಾನಿಗಳ ಬೇಡಿಕೆಗೆ ಮನ್ನಣೆ

11-09-25 10:11 pm       Bangalore Correspondent   ಕರ್ನಾಟಕ

ದಿವಂಗತ ನಟ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಇತ್ತೀಚೆಗೆ ನಿಧನರಾದ ನಟಿ ಬಿ.ಸರೋಜದೇವಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ಬೆಂಗಳೂರು, ಸೆ.11 : ದಿವಂಗತ ನಟ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಇತ್ತೀಚೆಗೆ ನಿಧನರಾದ ನಟಿ ಬಿ.ಸರೋಜದೇವಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಇದರೊಂದಿಗೆ ವಿಷ್ಣುವರ್ಧನ್ ಅಭಿಮಾನಿಗಳ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಕೊನೆಗೂ ಮನ್ನಣೆ ನೀಡಿದಂತಾಗಿದೆ.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಮೊದಲಾದವರು ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಗುರುವಾರ ಸಂಜೆ ಸಚಿವ ಎಚ್.ಕೆ ಪಾಟೀಲ್ ಈ ಇಬ್ಬರಿಗೆ ಕರ್ನಾಟಕ ರತ್ನ ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ. 

1972ರಲ್ಲಿ ವಂಶವೃಕ್ಷ ಚಿತ್ರದಲ್ಲಿ ನಟಿಸುವ ಮೂಲಕ ವಿಷ್ಣುವರ್ಧನ್ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಬಿಡುಗಡೆಯಾಗಿದ್ದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ವಿಷ್ಣುವರ್ಧನ್ ಮೋಡಿ ಮಾಡಿದ್ದು ಆ ಚಿತ್ರ ಬ್ಲಾಕ್ ಬಸ್ಟರ್ ಆಗಿದ್ದರಿಂದ ಮೊದಲ ಯತ್ನದಲ್ಲೇ ವಿಷ್ಣುವರ್ಧನ್ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯವು 2005ರಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತ್ತು.

ಕನ್ನಡದ ಹಿರಿಯ ಚಲನಚಿತ್ರ ನಟಿಯರಲ್ಲಿ ಬಿ.ಸರೋಜಾದೇವಿ ಅವರದ್ದು ಪ್ರಮುಖ ಹೆಸರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿಯಾಗಿ ಗುರುತಿಸಿಕೊಂಡರು. ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಅಭಿನಯ ಸರಸ್ವತಿ' ಮತ್ತು ತಮಿಳಿನಲ್ಲಿ 'ಕನ್ನಡತು ಪೈಂಗಿಲಿ' (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಸರೋಜಾದೇವಿ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರ 2008ರ ಜೀವಮಾನ ಸಾಧನೆ ಪ್ರಶಸ್ತಿ ನೀಡಿತ್ತು. 1992ರಲ್ಲಿ 'ಪದ್ಮಭೂಷಣ ಪ್ರಶಸ್ತಿ' ಮತ್ತು 1969ರಲ್ಲಿ ಪದ್ಮಶ್ರೀ ಪಡೆದಿದ್ದರು.
ಈ ಇಬ್ಬರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲಿ, ಯಾವಾಗ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡದ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ ಎಂದು ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈ ಮೊದಲು ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈ ಪೈಕಿ ಪುನೀತ್ ಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿತ್ತು. 

ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವುದು ವಿಶೇಷ. 1975ರಲ್ಲಿ ಬಿಡುಗಡೆಯಾದ ಭಾಗ್ಯಜ್ಯೋತಿ, ಶನಿ ಪ್ರಭಾವ, ರುದ್ರಾ0ಗ, ಜನನಿ ಜನ್ಮಭೂಮಿ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಕರ್ನಾಟಕ ಸರ್ಕಾರ ಇದುವರೆಗೆ 10 ಮಂದಿಗೆ ಕರ್ನಾಟಕ ರತ್ನ ನೀಡಿದ್ದು, ವಿಷ್ಣುವರ್ಧನ್ ಅವರಿಗೆ 11, ಸರೋಜಾದೇವಿ ಅವರಿಗೆ 12ನೇ ಪ್ರಶಸ್ತಿ ನೀಡಲಾಗಿದೆ. ಇದಕ್ಕೆ ಮೊದಲು 1992ರಲ್ಲಿ ರಾಷ್ಟ್ರಕವಿ ಕುವೆಂಪು, ಡಾ. ರಾಜ್ ಕುಮಾರ್, 1999ರಲ್ಲಿ ಎಸ್.ನಿಜಲಿಂಗಪ್ಪ, 2000ದಲ್ಲಿ ಸಿ.ಎನ್.ಆರ್ ರಾವ್, 2001ರಲ್ಲಿ ಡಾ.ದೇವಿಪ್ರಸಾದ್ ಶೆಟ್ಟಿ, 2005ರಲ್ಲಿ ಪಂಡಿತ್ ಭೀಮಸೇನ್ ಜೋಶಿ, 2007ರಲ್ಲಿ ಶಿವಕುಮಾರ ಸ್ವಾಮೀಜಿ, 2008ರಲ್ಲಿ ದೇ. ಜವರೇಗೌಡ, 2009ರಲ್ಲಿ ಡಿ. ವೀರೇಂದ್ರ ಹೆಗ್ಗಡೆ, 2021ರಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಲಾಗಿತ್ತು.

The Karnataka government has announced the prestigious Karnataka Ratna award posthumously to legendary actor “Sahasasimha” Dr. Vishnuvardhan and veteran actress B. Saroja Devi. The decision fulfills the long-pending demand of Vishnuvardhan’s fans and admirers across the state.