ಯುಕೆಯಲ್ಲಿ ಲಾಕ್ಡೌನ್ ಆಗಿದೆ, ಜರ್ಮನಿಯಲ್ಲಿ ನೈಟ್ ಕರ್ಫ್ಯೂ ಹಾಕಿದ್ದಾರೆ, ಅಲ್ಲಿನವರಿಗೆ ಬುದ್ಧಿ ಇಲ್ಲವೇ ?

26-12-20 03:11 pm       Bangalore Correspondent   ಕರ್ನಾಟಕ

ನೈಟ್ ಕರ್ಫ್ಯೂ ನಿರ್ಧಾರವನ್ನು ತಜ್ಞರ ಸಲಹೆಯನ್ನು ಪಡೆದು ಜನರ ಆರೋಗ್ಯದ ದೃಷ್ಟಿಯಿಂದ ಬಹಳ ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು.

ಬೆಂಗಳೂರು, ಡಿ.26: ನೈಟ್ ಕರ್ಫ್ಯೂ ನಿರ್ಧಾರವನ್ನು ತಜ್ಞರ ಸಲಹೆಯನ್ನು ಪಡೆದು ಜನರ ಆರೋಗ್ಯದ ದೃಷ್ಟಿಯಿಂದ ಬಹಳ ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು. ಅದು ಕೇವಲ ರಾಜಕೀಯ ನಿರ್ಧಾರ ಆಗಿರಲಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಎಡಬಿಡಂಗಿ ಸರಕಾರ ಎಂದು ಕರೆದಿದ್ದಾರೆ. ಆದರೆ, ಇದೇ ಸರಕಾರ ಕೊರೊನಾ ನಿಯಂತ್ರಣಕ್ಕೆ ತಂದಿದ್ದು, ಸೋಂಕಿಗೆ ಒಳಗಾದ 95 ಶೇ. ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬಾರಿ ಹೊಸ ವೈರಸ್ ಬಂದ ಬಳಿಕ ಯುಕೆಯಲ್ಲಿ ಲಾಕ್ಡೌನ್ ಆಗಿದೆ, ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಹಾಗೆಂದು ಅಲ್ಲಿನವರನ್ನು ಬುದ್ಧಿ ಇಲ್ಲದವರು ಎನ್ನಲಾಗುತ್ತದೆಯೇ..? ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರುವ ಬಗ್ಗೆ ಆರೋಗ್ಯ ಕ್ಷೇತ್ರದಲ್ಲಿ ಅನುಭವ ಪಡೆದವರ ಸಲಹೆ ಪಡೆದು ನಿರ್ಧಾರಕ್ಕೆ ಬರಲಾಗಿತ್ತು.

ಲಾಕ್ಡೌನ್ ಹೇರಿದರೆ ಆರ್ಥಿಕ ನಷ್ಟವಾಗುತ್ತದೆ. ಆದರೂ ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಜನರು ಕೊರೊನಾ ಮುಂಜಾಗ್ರತೆಯನ್ನು ಮರೆತಿದ್ದು, ಇಂಥ ಸಂದರ್ಭದಲ್ಲಿ ಜನರನ್ನು ಎಚ್ಚರಿಸುವುದು ಸರಕಾರದ ಕರ್ತವ್ಯ ಎಂದು ಹೇಳಿದ ಸುಧಾಕರ್, ಬ್ರಿಟನ್ನಿಂದ ರಾಜ್ಯಕ್ಕೆ ಆಗಮಿಸಿದ 15 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು ಹತ್ತು ಜನರ ಮಾದರಿಯನ್ನು ನಿಮ್ಹಾನ್ಸ್ ಗೆ ಕಳಿಸಲಾಗಿದೆ ಎಂದು ಹೇಳಿದರು.

ನನ್ನ ಬಗ್ಗೆ ಡಿಕೆ ಸುರೇಶ್, ಡಿಕೆಶಿಗಳು ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತು ಜಾಮೀನಿನ ಮೇಲೆ ಹೊರಗಿರುವ ಮಂದಿ ಯಾರು ಎನ್ನುವುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಡಿಕೆಶಿ ಬಗ್ಗೆ ಕುಟುಕಿದ್ದಾರೆ.