ಬ್ರಿಟನ್ ವೈರಸ್ ಆತಂಕ ; ರಾಜ್ಯದಲ್ಲಿ 151 ಮಂದಿ ನಾಪತ್ತೆ ! ಸೋಂಕು ಸೋಕದಿದ್ದೀತೇ..?

26-12-20 04:47 pm       Bangalore Correspondent   ಕರ್ನಾಟಕ

ಬ್ರಿಟನ್ ನಿಂದ ಕಳೆದ 15 ದಿನಗಳಲ್ಲಿ 1582 ಮಂದಿ ಬೆಂಗಳೂರಿಗೆ ಬಂದಿದ್ದರಲ್ಲಿ 151 ಮಂದಿ ಪತ್ತೆಯಾಗದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಬೆಂಗಳೂರು, ಡಿ.26: ಒಂದೆಡೆ ರಾಜ್ಯ ಸರಕಾರ ನೈಟ್ ಕರ್ಫ್ಯೂ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದರೆ, ಇತ್ತ ಬ್ರಿಟನ್ ವೈರಸ್ ಈಗ ರಾಜ್ಯ ಸರಕಾರದ ಅಧಿಕಾರಿಗಳ ನಿದ್ದೆಗೆಡಿಸಿದೆ.

ಬ್ರಿಟನ್ ನಿಂದ ಕಳೆದ 15 ದಿನಗಳಲ್ಲಿ 1582 ಮಂದಿ ಬೆಂಗಳೂರಿಗೆ ಬಂದಿದ್ದಾರೆಂಬ ಅಂಕಿ ಅಂಶ ಇದೆ. ಆದರೆ, ಹೀಗೆ ಬಂದಿರುವ ಎಲ್ಲರನ್ನೂ ಪತ್ತೆ ಮಾಡಲು ಇನ್ನೂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಆ ಪೈಕಿ 151 ಮಂದಿ ಪತ್ತೆಯಾಗದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಬೆಂಗಳೂರಿನಲ್ಲಿ ಬ್ರಿಟನ್ ನಿಂದ ಆಗಮಿಸಿದ 11 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆದರೆ, ಅವರಲ್ಲಿ ರೂಪಾಂತರಿತ ವೈರಸ್ ಇದೆಯೇ ಎನ್ನೋದು ದೃಢಪಟ್ಟಿಲ್ಲ. ಅದರ ಕುರಿತು ನಿಮ್ಹಾನ್ಸ್ ಸೆಂಟರಿನ ಮೈಕ್ರೋ ಲ್ಯಾಬ್ ನಲ್ಲಿ ಪರೀಕ್ಷೆ ಕೈಗೊಳ್ಳಲಾಗಿದೆ. ಇನ್ನು ಈ 11 ಮಂದಿಯಿಂದ ಇತರೇ 28 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬ ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಾಪತ್ತೆಯಾಗಿರುವ 151 ಮಂದಿಯಲ್ಲಿ ಬ್ರಿಟನ್ ವೈರಸ್ ಕಂಡುಬಂದಿದ್ದರೆ, ಅದು ಇಡೀ ರಾಜ್ಯಕ್ಕೆ ಮಾರಕವಾಗುವ ಸಾಧ್ಯತೆಯಿದೆ. ಅವರು ಬೆಂಗಳೂರಿನಲ್ಲೇ ಇದ್ದಾರೆಯೇ ಬೇರೆ ಕಡೆಗೆ ತೆರಳಿದ್ದಾರೆಯೇ ಎನ್ನುವುದು ದೃಢಪಟ್ಟಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಾಲ್ ಡಿಟೈಲ್ಸ್, ಮೊಬೈಲ್ ನಂಬರ್ ಆಧರಿಸಿ, ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಬಿಬಿಎಂಪಿ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ.

ಈ ಪೈಕಿ ಯಾರೇ ಆದ್ರೂ ಉದ್ದೇಶಪೂರ್ವಕ ನಾಪತ್ತೆಯಾಗಿದ್ದರೆ ಅಂಥವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. 

151 passengers who arrived from Britan to Bengaluru are said to be untraceable by the health department officials.