Agahnashini Vedavati river Project: ಎತ್ತಿ‌ನಹೊಳೆ ರೀತಿಯಲ್ಲೇ 'ಕಚಡಾ' ಯೋಜನೆಗೆ ಸಿದ್ಧತೆ ; ಅಘನಾಶಿನಿ - ವೇದಾವತಿ ನದಿ ಜೋಡಣೆಗೆ ವರದಿ ರೆಡಿ, 23 ಸಾವಿರ ಕೋಟಿ ಸುರಿದು ಶಿರಸಿ, ಸಾಗರದಲ್ಲಿ ಅರಣ್ಯಕ್ಕೆ ಕತ್ತರಿ! ಸಿದ್ದರಾಮಯ್ಯ ಸರ್ಕಾರದಿಂದ ಮತ್ತೊಂದು ಮಹತ್ತರ 'ಕೊಡುಗೆ' ? 

28-09-25 12:39 pm       Bangalore Correspondent   ಕರ್ನಾಟಕ

ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿಗೆ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಾಗಲೇ ಪಶ್ಚಿಮ ಘಟ್ಟದಲ್ಲಿ ಮತ್ತೊಂದು ಬೃಹತ್‌ ನೀರಾವರಿ ಯೋಜನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಬೆಂಗಳೂರು, ಸೆ.28: ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿಗೆ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಾಗಲೇ ಪಶ್ಚಿಮ ಘಟ್ಟದಲ್ಲಿ ಮತ್ತೊಂದು ಬೃಹತ್‌ ನೀರಾವರಿ ಯೋಜನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಎತ್ತಿನಹೊಳೆ ರೀತಿಯಲ್ಲೇ ದುಡ್ಡು ಹೊಡೆಯುವ, ಅದಕ್ಕಿಂತಲೂ ದೊಡ್ಡದಾದ ಅಘನಾಶಿನಿ- ವೇದಾವತಿ ನದಿ ತಿರುವು ಯೋಜನೆಗೆ ಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ. 

ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಯ ಸಾಧ್ಯತಾ ವರದಿ ಸಿದ್ಧವಾಗಿದ್ದು, ಇದು ಎತ್ತಿನಹೊಳೆಗಿಂತ ದೊಡ್ಡದಾದ ಯೋಜನೆಯಾಗಿದೆ ಎಂದು ವೃಕ್ಷಲಕ್ಷ ಆಂದೋಲನ ಬಹಿರಂಗಪಡಿಸಿದೆ. ಈ ಯೋಜನೆಯಿಂದ 1,20,000 ಮರಗಳು ನಾಶವಾಗಲಿದ್ದು, 600 ಎಕರೆ ಅರಣ್ಯ ಭೂಮಿ ನಾಶವಾಗುತ್ತದೆ. ಈ ಕುರಿತು ಸಮಾಲೋಚನೆ ನಡೆಸಿ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ. 

ಸರಕಾರದ ಮನವಿ ಮೇರೆಗೆ ಸಾಧ್ಯತಾ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ. ಅಂದಾಜು 23000 ಕೋಟಿ ರೂ. ವೆಚ್ಚವಾಗಲಿದ್ದು 194 ಕಿ.ಮೀ ಉದ್ದಕ್ಕೆ ಪೈಪ್‌ಲೈನ್‌ ಹಾಕಲಾಗುತ್ತದೆ ಎನ್ನುತ್ತದೆ ವರದಿ. ಮಾಹಿತಿ ಪ್ರಕಾರ, ಬೆಂಗಳೂರಿನ ಕಚೇರಿಗಳೇ ಈ ವರದಿ ತಯಾರಿಸಿ ಹೈದರಾಬಾದ್‌ ಕಚೇರಿಗೆ ಕಳುಹಿಸಿಕೊಟ್ಟಿದೆ. ಅಲ್ಲಿಂದ ದಿಲ್ಲಿಯ ಕೇಂದ್ರ ಕಚೇರಿಗೆ ವರದಿ ಸದ್ಯವೇ ಹಸ್ತಾಂತರವಾಗಲಿದೆ. ಆಮೂಲಕ ಮತ್ತೊಂದು ಹೊಸ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡರ ಪಿತೂರಿಯಿಂದ ಎತ್ತಿನಹೊಳೆ ಯೋಜನೆಯನ್ನು ತರಾತುರಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಹಂತ ಹಂತವಾಗಿ 23 ಸಾವಿರ ಕೋಟಿ ಸುರಿದರೂ, ತೊಟ್ಟು ನೀರನ್ನೂ ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಹರಿಸಲು ಸಾಧ್ಯವಾಗಿಲ್ಲ. 


ಇದೀಗ ಅಘನಾಶಿನಿ ನದಿಯನ್ನು ತಡೆದು ಪೂರ್ವದ ವೇದಾವತ ನದಿಗೆ ಸಂಪರ್ಕಿಸಲು ಅತ್ಯಂತ ಅವೈಜ್ಞಾನಿಕ ಯೋಜನೆಯನ್ನು ತಯಾರಿಸಲಾಗಿದೆ. ಇದರಿಂದ ಶಿರಸಿ ಹಾಗೂ ಸಾಗರ ತಾಲೂಕಿನ ಬಹುತೇಕ ಅರಣ್ಯ ನಾಶವಾಗಲಿದೆ. ಶಿರಸಿ ನಗರ, ಕುಮಟಾ ಪಟ್ಟಣ, ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆಗೆ ಹಾಗೂ ಒಂದು ಲಕ್ಷ ರೈತರ ಪಂಪ್‌ ಸೆಟ್‌ಗಳಿಗೆ ಮಾತ್ರವಲ್ಲ, ಇಡೀ ಉತ್ತರ ಕನ್ನಡ ಜಿಲ್ಲೆಗೆ ಭೀಕರ ಹೊಡೆತ ತರಲಿದೆ ಎಂದು ತಜ್ಞರ ತಂಡ ಎಚ್ಚರಿಸಿದೆ. ಈಗಾಗಲೇ ನೇತ್ರಾವತಿ ನದಿ ತಿರುಗಿಸುವ ಯೋಜನೆಯಾಗಿ ಸಕಲೇಶಪುರದಲ್ಲಿ ಬೆಟ್ಟಗಳನ್ನು ಕಡಿದು ಅರಣ್ಯ ನಾಶ ಮಾಡಲಾಗಿದೆ, ಅಲ್ಲಿ ಸಣ್ಣ ಸಣ್ಣ ಎಂಟು ಅಣೆಕಟ್ಟನ್ನು ಕಟ್ಟಿದ್ದರೂ ಮಳೆಗಾಲದಲ್ಲೇ ನೀರು ಸಂಗ್ರಹವಾಗುತ್ತಿಲ್ಲ. ಕಳೆದ ಬಾರಿ ಚಿತ್ರದುರ್ಗದ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬುತ್ತೇವೆಂದು ಹೇಳಿದ್ದರೂ ಅದಿನ್ನೂ ಸಾಧ್ಯವಾಗಿಲ್ಲ. ನೂರಾರು ಕಿಮೀ ಉದ್ದಕ್ಕೂ ಅರಣ್ಯ ನಾಶ, ಪೈಪ್ ಲೈನ್ ಹಾಕಿ ಜನವಸತಿ ಪ್ರದೇಶಗಳ ನಾಶವಾಗಿದ್ದು ಬಿಟ್ಟರೆ ಜನಸಾಮಾನ್ಯರಿಗೆ ಉಪಯೋಗ ಆಗಿಲ್ಲ. ರಾಜಕಾರಣಿಗಳು ಮತ್ತು ಗುತ್ತಿಗೆದಾರರು ಮಾತ್ರ ಇದರ ನೆಪದಲ್ಲಿ ಬೇಕಾಬಿಟ್ಟಿ ಹಣ ಮಾಡಿಕೊಂಡಿದ್ದಾರೆ. ಇದೀಗ ಚಿತ್ರದುರ್ಗದ ವಾಣಿವಿಲಾಸ ಜಲಾಶಯ ತುಂಬಿಸಲು ಅಘನಾಶಿನಿ ನೀರು ತರಲು ಹೊಸ ಯೋಜನೆಗೆ ಮುಂದಾಗಿದ್ದು ಆತಂಕಕಾರಿ. 

ನೀರಾವರಿ ಇಲಾಖೆ ಉದ್ದೇಶಿತ ನದಿ ಜೋಡಣೆಯ ಪೂರ್ವಸಾಧ್ಯತಾ ವರದಿಯನ್ನು ಪಡೆದಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮುಂದಿನ ದಿನಗಳಲ್ಲಿಸಮಾಲೋಚನೆ ನಡೆಸಿ ಹೋರಾಟದ ಬಗ್ಗೆ ನಿರ್ಧರಿಸುತ್ತದೆ ಎಂದು ವೃಕ್ಷಲಕ್ಷ ಆಂದೋಲನ ಸಂಘಟನೆ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ. ಈಗಾಗಲೇ ಹಲವಾರು ಅವೈಜ್ಞಾನಿಕ ಯೋಜನೆಗಳಿಂದಾಗಿ ಪಶ್ಚಿಮ ಘಟ್ಟಗಳ ಮೇಲೆ ಭಾರೀ ಪರಿಣಾಮ ಉಂಟಾಗಿದ್ದು ಪ್ರತಿ ಮಳೆಗಾಲದಲ್ಲು ಘಟ್ಟದ ಉದ್ದಕ್ಕೂ ಭೂಕುಸಿತ, ಪ್ರವಾಹ ಉಂಟಾಗುತ್ತಿದೆ. ಇತಿಹಾಸದಲ್ಲಿ ಹಿಂದೆಂದೂ ಇಲ್ಲದ ಈ ರೀತಿಯ ಘಟನೆಗಳು ಕಳೆದ ಏಳೆಂಟು ವರ್ಷಗಳಲ್ಲಿ ಶುರುವಾಗಿದ್ದು ಅನ್ನುವುದೇ ಮನುಷ್ಯ ನಿರ್ಮಿತ ದುರಂತಕ್ಕೆ ಸಾಕ್ಷಿ.

Even as widespread opposition mounts against the Sharavathi river pumped-storage project in Uttara Kannada and Shivamogga districts, the Karnataka government is preparing for yet another massive irrigation scheme in the Western Ghats. A feasibility report has been readied for the proposed Aghanashini–Vedavathi river diversion project, described as larger than the controversial Ettinahole project.