ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಹೈಡ್ರಾಮಾ ; ಕನ್ನಡ ಧ್ವಜಸ್ತಂಭ ಇಡಲು ಪ್ರಯತ್ನ

28-12-20 02:37 pm       Headline Karnataka News Network   ಕರ್ನಾಟಕ

ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜಸ್ತಂಭ ಇಡಲು ಪ್ರಯತ್ನಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.

ಬೆಳಗಾವಿ, ಡಿಸೆಂಬರ್ 28; ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜಸ್ತಂಭ ಇಡಲು ಪ್ರಯತ್ನ ನಡೆಸಲಾಗಿದೆ. ಕನ್ನಡ ಪರ ಸಂಘಟನೆಗಳ ಪ್ರಯತ್ನಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.

ಸೋಮವಾರ ಏಕಾಏಕಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಧ್ವಜ ಇರುವ ಸ್ತಂಭವನ್ನು ಪಾಲಿಕೆ ಕಚೇರಿ ಮುಂದೆ ಸ್ಥಾಪನೆ ಮಾಡಲು ಪ್ರಯತ್ನ ನಡೆಸಿದರು. ಆಗ ಪೊಲೀಸರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭವನ್ನು ಕಾರ್ಯಕರ್ತರು ನಿಲ್ಲಿಸಿದರು.

ಇದರಿಂದಾಗಿ ಮಹಾನಗರ ಪಾಲಿಕೆ ಎದುರು ಹೈಡ್ರಾಮಾ ನಡೆಯಿತು. ಪೊಲೀಸರು ಮೊಳೆ, ಸುತ್ತಿಗೆಗಳನ್ನು ವಶಕ್ಕೆ ಪಡೆದುಕೊಂಡರು.

ಕನ್ನಡ ಹೋರಾಟಗಾರರು ಧ್ವಜಸ್ತಂಭ ಅಳವಡಿಸಿ ನಾಡಗೀತೆ ಹಾಡಿದರು. ಪೊಲೀಸರು ಅವರನ್ನು ಸ್ಥಳದಿಂದ ಕಳಿಸಲು ಪ್ರಯತ್ನ ನಡೆಸಿದರು. ಆಗ ವಾಗ್ವಾದ ಆರಂಭವಾಯಿತು. ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ಪರ ಸಂಘಟನೆಗಳ ಸದಸ್ಯರು ಇತಿಹಾಸ ಬರೆದರು. ಪೊಲೀಸರು ಮತ್ತು ಹೋರಾಟಗಾರರ ನಡುವೆ ಜಟಾಪಟಿ ಮುಂದುವರೆದಿದೆ.