ಬೆಂಗಳೂರು ; ಕಾರಿನ ಮಿರ್‌ರ್‌ಗೆ ಬೈಕ್‌ ಟಚ್‌ ಆಗಿದ್ದಕ್ಕೆ ಚೇಸಿಂಗ್, ಕಾರಿನಿಂದ ಗುದ್ದಿಸಿ ಯುವಕನ ಹತ್ಯೆ, ಡೆಡ್ಲಿ ದಂಪತಿ ಸೆರೆ 

29-10-25 09:12 pm       Bangalore Correspondent   ಕರ್ನಾಟಕ

ಕಾರಿನ ಮಿರ್‌ರ್‌ಗೆ ಬೈಕ್‌ ಟಚ್‌ ಆದ ಒಂದೇ ಒಂದು ಕಾರಣಕ್ಕೆ, ಇಬ್ಬರು ಯುವಕರಿದ್ದ ಗಾಡಿಯನ್ನು ಎರಡೂ ಕಿಲೋ ಮೀಟರ್‌ಗೂ ಹೆಚ್ಚು ದೂರ ಬೆನ್ನಟ್ಟಿ, ಬೇಕಂತಲೇ ಡಿಕ್ಕಿ ಹೊಡೆದು, ಒಬ್ಬನ ಸಾವಿಗೆ ದಂಪತಿಯೊಬ್ಬರು ಕಾರಣರಾಗಿರುವ ಘಟನೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರು, ಅ 29 : ಕಾರಿನ ಮಿರ್‌ರ್‌ಗೆ ಬೈಕ್‌ ಟಚ್‌ ಆದ ಒಂದೇ ಒಂದು ಕಾರಣಕ್ಕೆ, ಇಬ್ಬರು ಯುವಕರಿದ್ದ ಗಾಡಿಯನ್ನು ಎರಡೂ ಕಿಲೋ ಮೀಟರ್‌ಗೂ ಹೆಚ್ಚು ದೂರ ಬೆನ್ನಟ್ಟಿ, ಬೇಕಂತಲೇ ಡಿಕ್ಕಿ ಹೊಡೆದು, ಒಬ್ಬನ ಸಾವಿಗೆ ದಂಪತಿಯೊಬ್ಬರು ಕಾರಣರಾಗಿರುವ ಘಟನೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ.

ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಕನ್ನಡದ ಗಾದೆಯಂತೆ ಮನೋಜ್ ಕುಮಾರ್ ಮತ್ತು ಆತನ ಪತ್ನಿ ಆರತಿ ಶರ್ಮಾ ಎನ್ನುವವರು ತಮ್ಮ ದರ್ಪವನ್ನು ಯುವಕರ ಮೇಲೆ ತೋರಿರುವ ಘಟನೆ ಅಕ್ಟೋಬರ್ 25 ರಂದು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಲೇಔಟ್‌ನಲ್ಲಿ ರಾತ್ರಿ ಸುಮಾರು 11:30ರಲ್ಲಿ ನಡೆದಿದೆ.

ಅಪಘಾತ ಪ್ರೇರಿತ ಕೊಲೆ ಪ್ರಕರಣದಲ್ಲಿ ದರ್ಶನ್‌ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ವರುಣ್‌ ಎಂಬುವವನಿಗೆ ಗಂಭೀರ ಗಾಯವಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪುಟ್ಟೇನಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಂತೆ ಕಂಡ ಕೊಲೆ;

ಆರಂಭದಲ್ಲಿ ಈ ಘಟನೆಯನ್ನು ಅಪಘಾತವೆಂದು ಪರಿಗಣಿಸಿ ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಕೊಳ್ಳಲಾಗಿತ್ತು. ಆದರೆ, ಪುಟ್ಟೇನಹಳ್ಳಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಡಿಸಿ, ತನಿಖೆ ಕೈಗೆತ್ತಿಕೊಂಡಾಗ ಇದು ಅಪಘಾತವಲ್ಲ, ಬದಲಿಗೆ ಪೂರ್ವನಿಯೋಜಿತ ಕೊಲೆ ಎಂಬ ಸತ್ಯ ಹೊರಬಿದ್ದಿದೆ.

ಕೊಲೆಗೆ ಕಾರಣ ಏನು?

ಅಕ್ಟೋಬರ್ 25 ರಂದು ಆರೋಪಿಗಳಾದ ಮನೋಜ್ ಕುಮಾರ್ ಮತ್ತು ಆತನ ಪತ್ನಿ ಆರತಿ ಶರ್ಮಾ ಅವರು ಕಾರಿನಲ್ಲಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ, ದರ್ಶನ್ ಮತ್ತು ವರೂಣ್ ಸಂಚರಿಸುತ್ತಿದ್ದ ಬೈಕ್, ಅವರ ಕಾರಿನ ಮಿರರ್‌ಗೆ ತಾಗಿದೆ. ಇದರಿಂದ ಕೋಪಗೊಂಡ ದಂಪತಿ, ಬೈಕನ್ನು ಚೇಸ್‌ ಮಾಡಲು ಶುರುಮಾಡಿದರು. ಸುಮಾರು ಎರಡು ಕಿಲೋ ಮೀಟರ್‌ ಬೆನ್ನಟ್ಟುವ ಆಟ ಮುಂದುವರೆದಿತ್ತು.

ಕಾರು ತಮ್ಮನ್ನೇ ಚೇಸ್‌ ಮಾಡುತ್ತಿದೆ ಎಂದು ತಿಳಿದುಕೊಂಡ ಯುವಕರು ಅವರಿಂದ ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು ಮೊದಲು ಹೇಗೋ ಅವರಿಂದ ತಪ್ಪಿಸಿಕೊಂಡರು. ಆದರೂ ಸುಮ್ಮನಾಗದ ಆರೋಪಿಗಳು, ಮತ್ತೆ ಯೂ-ಟರ್ನ್ ಮಾಡಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗೆ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಕಂಡ ಆರೋಪಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್‌ ದರ್ಶನ್‌ ಮೃತಪಟ್ಟಿದ್ದಾರೆ.

ಬೈಕ್‌ಗೆ ಕಾರು ಗುದ್ದಿದ್ದ ತಕ್ಷಣ ಅವರಿಬ್ಬರಿಗೂ ಗಾಯವಾಗಿದ್ದನ್ನು ಕಂಡ ದಂಪತಿಗಳು ಪೊಲೀಸರಿಗೆ ಸಿಕ್ಕಿ ಬೀಳದೆ ಇರಲು ಅಲ್ಲಿಂದ ಮಾಸ್ಕ್‌ ಧರಿಸಿ ಹೊರಟು ಹೋದರು. ಆ ನಂತರ ತಮ್ಮಿಂದ ಅಪಘಾತ ನಡೆದಿದೆ ಎಂಬ ಸುಳಿವು ಸಿಗದಂತೆ ಮಾಡಲು. ಮತ್ತೆ ಅದೇ ಸ್ಥಳಕ್ಕೆ ವಾಪಸ್ ಬಂದಿದ್ದಾರೆ. ಅಪಘಾತದ ರಭಸಕ್ಕೆ ತಮ್ಮ ಕಾರಿನಿಂದ ಕೆಳಗೆ ಬಿದ್ದಿದ್ದ ಕೆಲವು ಅವಶೇಷಗಳನ್ನು ಸಂಗ್ರಹಿಸಿಕೊಂಡು ಅಲ್ಲಿಂದ ಪರಾರಿಯಾಗುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ.

ಕಳರಿಪಟು ಶಿಕ್ಷಕನ ಮೇಲೆ ಕೊಲೆ ಆರೋಪ

ಪೊಲೀಸರ ತನಿಖೆಯಿಂದ ಆರೋಪಿ ಮನೋಜ್ ಕುಮಾರ್ ಓರ್ವ ಕಳರಿಪಟ್ಟು ಕಲಾವಿದ ಮತ್ತು ಶಿಕ್ಷಕ ಎಂದು ತಿಳಿದುಬಂದಿದೆ. ಆತ ಬನ್ನೇರುಘಟ್ಟ ರಸ್ತೆಯಲ್ಲಿ ತನ್ನದೇ ಆದ ಅಕಾಡೆಮಿಯನ್ನು ನಡೆಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ, ಪುಟ್ಟೇನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ದಂಪತಿಯಾದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಅವರನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

In a shocking case of road rage, a Bengaluru couple chased two bikers for over two kilometers after their car’s side mirror was accidentally touched — and deliberately rammed them, killing one of the riders.