ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿರೋರೆಲ್ಲಾ ದೇಶದ್ರೋಹಿಗಳು ; ಅನಂತ ಹೆಗಡೆ ಕಿಡಿ

10-08-20 05:57 pm       Headline Karnataka News Network   ಕರ್ನಾಟಕ

ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿರುವ ಅಧಿಕಾರಿಗಳೆಲ್ಲ ದೇಶದ್ರೋಹಿಗಳು.ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಿಡಿ ಕಾರಿದ್ದಾರೆ.‌

ಕಾರವಾರ, ಆಗಸ್ಟ್ 10: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿರುವ ಅಧಿಕಾರಿಗಳೆಲ್ಲ ದೇಶದ್ರೋಹಿಗಳು..ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಿಡಿ ಕಾರಿದ್ದಾರೆ.‌

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಸಂಸದರು ಈ ಉತ್ತರ ನೀಡುತ್ತಾ ತಮ್ಮದೇ ಸರಕಾರದ ಅಧೀನ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. 

ಬಿಎಸ್ಸೆನ್ನೆಲ್ ಸರಿಪಡಿಸಲು ನಮ್ಮ ಸರಕಾರದಿಂದಲೂ ಸಾಧ್ಯವಾಗಿಲ್ಲ. ಸಮರ್ಪಕ ಸೇವೆ ನೀಡಲು ಬಿಎಸ್ಎನ್ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದೂ ಇಲ್ಲ. ಅಧಿಕಾರಿಗಳು ಎಷ್ಟು ಆಲಸಿಯಾಗಿದ್ದಾರೆ ಅಂದರೆ ಟೋಟಲೀ ಜಿಡ್ಡು ಹಿಡಿದು ಹೋಗಿದೆ. ನಮ್ಮ ಕಾರವಾರ ಮಾತ್ರ ಅಲ್ಲ. ದೆಹಲಿಯಲ್ಲಿ ಇದಕ್ಕಿಂತ ಹೀನ ಸ್ಥಿತಿಯಿದೆ. ತಂತ್ರಜ್ಞಾನ, ಮೂಲಸೌಕರ್ಯ ಎಲ್ಲ ಇದ್ದರೂ, ಸರಕಾರ ಸಂಬಳ ಕೊಡುತ್ತಿದ್ದರೂ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳಿಸುತ್ತೇವೆ. ಏನೇ ಆಗಲಿ, ಮುಂದೆ ಬಿಎಸ್ಎನ್ಎಲ್ ಸಂಸ್ಥೆಯನ್ನು ಮೇಜರ್ ಸರ್ಜರಿಗೆ ಒಳಪಡಿಸುತ್ತೇವೆ. ಸಂಸ್ಥೆಯನ್ನು ಖಾಸಗೀಕರಣವಾದ್ರೂ ಸರಿ, ನಾವು ರೆಡಿ ಇದ್ದೇವೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದ ಸಂಸದರು ! 

ಕಳೆದ ತಿಂಗಳು ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಬಿಎಸ್ಎನ್ಎಲ್ ಅಧಿಕಾರಿಗಳ ಸಭೆ ನಡೆಸಿದ್ದರು.  ಉತ್ತರ ಕನ್ನಡ ಜಿಲ್ಲೆಯಲ್ಲಿ ಟವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಹಾಗೂ ಪಂಚಾಯ್ತಿಗಳಿಗೆ ಇಂಟರ್ ನೆಟ್ ಸೇವೆ ವಿಚಾರದಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಪಂಚಾಯ್ತಿಗಳಿಗೆ ಇಂಟರ್ನೆಟ್ ಕನೆಕ್ಷನ್ ನೀಡಿರದಿದ್ದರೂ, ನೀಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿಗಳನ್ನು ಬೈದು ಕಳಿಸಿದ್ದರು. ಅಲ್ಲದೆ, ಸಭೆಯಲ್ಲೇ ಅಧಿಕಾರಿಗಳಿಗೆ ಚಾಟಿ ಬೀಸಿ, ವಾರದೊಳಗೆ ಸರಿಯಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಪ್ರತಿಭಟನೆ ಕೂರುವುದಾಗಿ ಹೇಳಿ ತೆರಳಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ಮಾಡದೇ ನುಣಚಿಕೊಳ್ಳುವ ಕೆಲಸ ಮಾಡಿದ್ದರು. ಹೀಗಾಗಿ ಸಂಸದರು ಈ ಬಗ್ಗೆ ಮತ್ತೆ ಅಧಿಕಾರಿಗಳ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬಿಎಸ್ಸೆನ್ನೆಲ್ ನೆಟ್ಟರ್ಕ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಸದರು ಕೆರಳಿ ಕೆಂಡವಾಗಿದ್ದಾರೆ. ಸಂಸ್ಥೆಯಲ್ಲಿ ತುಂಬಿಕೊಂಡಿರುವ ಮಂದಿಯೆಲ್ಲಾ ದೇಶದ್ರೋಹಿಗಳು ಎಂದು ಕಿಡಿಕಾರಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

Video: