ಸಿದ್ದರಾಮಯ್ಯ ಸಂಕಲ್ಪ ಈಡೇರುತ್ತೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ; ಜನಾರ್ದನ ರೆಡ್ಡಿ ಭವಿಷ್ಯ 

28-11-25 07:19 pm       HK News Desk   ಕರ್ನಾಟಕ

ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಕಲ್ಪವೂ ಈಡೇರುತ್ತೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿಯೂ ಅಧಿಕಾರ ಪಡೆಯಲಿದ್ದಾರೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಗಂಗಾವತಿ, ನ.28 : ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಕಲ್ಪವೂ ಈಡೇರುತ್ತೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿಯೂ ಅಧಿಕಾರ ಪಡೆಯಲಿದ್ದಾರೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ಆಗಿರುವ ಒಳ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಎರಡುವರೆ ವರ್ಷದ ನಂತರ ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ, ಇದರಿಂದಾಗಿ ದೇವರಾಜ್ ಅರಸು ಅವರು ಸುದೀರ್ಘ ಕಾಲದ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಸಿದ್ದರಾಮಯ್ಯ ಮುರಿದಂತಾಗುತ್ತದೆ ಎಂದರು. ರಾಜಕೀಯ ವ್ಯವಹಾರ ಮಾತುಕತೆಯ ಫಲವಾಗಿ ಡಿ.ಕೆ. ಶಿವಕುಮಾರ್ ಅವರು ಇನ್ನುಳಿದ ಅವಧಿಗೆ ಮುಖ್ಯಮಂತ್ರಿ ಆಗಲಿದ್ದಾರೆಂದು ಸಿದ್ದರಾಮಯ್ಯ‌ ಆಪ್ತ ವಲಯದ ಮೂಲಗಳು ತಿಳಿಸಿವೆ ಎಂದು ಹೇಳಿದರು.

ಈ ಭವಿಷ್ಯವನ್ನು ಸಂಡೂರು ಉಪ ಚುನಾವಣೆಯ ಸಂದರ್ಭದಲ್ಲಿ ನಾನು ಬಹಿರಂಗ ಭಾಷಣದಲ್ಲೇ ಹೇಳಿದ್ದೆ. ಎರಡೂವರೆ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳಿದ ಅವಧಿಗೆ ಡಿ.ಕೆ. ಶಿವಕುಮಾರ್ ಆಗಲಿದ್ದಾರೆ. ಆದ್ದರಿಂದ ಇದು ಒಳ ಒಪ್ಪಂದದ ಸರ್ಕಾರ ಎಂದು ಭವಿಷ್ಯ ನುಡಿದಿದ್ದೆ, ಅದು ಈಗ ನಿಜವಾಗುತ್ತಿದೆ ಎಂದರು.

ಇವರ ರಾಜಕೀಯ ಮೇಲಾಟಕ್ಕೆ ರಾಜ್ಯ ಸರ್ಕಾರದ ಆಡಳಿತ ಸ್ತಬ್ಧವಾಗಿದೆ. ಜನರ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳು ಯಾರ ಮಾತನ್ನು ಕೇಳಬೇಕು ಎಂಬ ಗೊಂದಲದಲ್ಲಿದ್ದಾರೆ. ರಾಜಕೀಯ ಪಟ್ಟವನ್ನು ಅರಿತಿರುವ ಸಿದ್ದರಾಮಯ್ಯ ಅವರು ಕೆಲ ಗಾಳಗಳನ್ನು ಉರುಳಿಸುವ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಕೌಂಟರ್ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಅವರು ಜಗತ್ತಿಗೆ ಒಳ್ಳೆಯದಾಗುವ ಮಾತನ್ನು ಉಳಿಸಿಕೊಳ್ಳುವುದು ಸಹ ಮಹಾನ್ ಕಾರ್ಯ ಎಂದು ನೇರವಾಗಿ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವೀಕ್ ಇಲ್ಲ, ಕರ್ನಾಟಕದ ರಾಜಕೀಯ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದು ದೇವರಾಜ ಅರಸು ಅವರ ಸುದೀರ್ಘ ಮುಖ್ಯಮಂತ್ರಿ ಆಗಿರುವ ದಾಖಲೆ ಮುರಿದ ನಂತರ ಸುಲಭವಾಗಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಶ್ವಾಸ ನನಗಿದೆ ಎಂದರು.

Speaking in Gangavati, BJP MLA G. Janardhan Reddy predicted that Chief Minister Siddaramaiah will soon step down—honoring the alleged 2023 internal power-sharing agreement—and Deputy Chief Minister D.K. Shivakumar will take over as the next Chief Minister of Karnataka.